ಕರಾವಳಿ

ಮೂಡ ನಿವೇಶನ ವಿನ್ಯಾಸ ಅನುಮೋದನೆ ಶುಲ್ಕದಲ್ಲಿ ಭಾರೀ ಕಡಿತ : ರೂ.33,000 ದಿಂದ ರೂ.6,800ಕ್ಕೆ ಇಳಿಕೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2020ರ ಫೆಬ್ರವರಿಯಿಂದ ನಿವೇಶನ ವಿನ್ಯಾಸ ಅನುಮೋದನೆಯ ಶುಲ್ಕದಲ್ಲಿ ಮಾಡಲಾಗಿದ್ದ ಭಾರೀ ಏರಿಕೆಯನ್ನು ಕಡಿತಗೊಳಿಸಿ ರಾಜ್ಯ ಸರಕಾರ ಆದೇಶಿಸಿದ್ದು, ಪ್ರಸಕ್ತ ಹೊಸ ಪರಿಷ್ಕೃತ ದರವನ್ನು ಅನ್ವಯಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು ತಿಳಿಸಿದ್ದಾರೆ.

ನಗರ ಯೋಜನಾ ವಿಭಾಗಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ಸಂಗ್ರಹಿಸುತ್ತಿದ್ದ ವಿನ್ಯಾಸ ಅನುಮೋದನೆಯ ಶುಲ್ಕ ಹೆಚ್ಚಳದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಮನಗಂಡು ಈ ಬಗ್ಗೆ ಶುಲ್ಕವನ್ನು ಪರಿಷ್ಕರಿಸುವಂತೆ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಸರಕಾರಕ್ಕೆ ದಿನಾಂಕ 31-08-2020 ನಿರ್ಣಯಿಸಿ ಪತ್ರ ಬರೆಯಲಾಗಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜುರವರು ಚರ್ಚಿಸಿ ಇದೀಗ ಶುಲ್ಕವನ್ನು ಕಡಿತಗೊಳಿಸಿ ಆದೇಶವನ್ನು ನೀಡಿರುತ್ತಾರೆ. . ಕಳೆದ ವರ್ಷ ಏರಿಕೆಯಾದ ಶುಲ್ಕದ ಪ್ರಕಾರ ಸೆಂಟ್ಸ್‌ಗೆ 6 ಲಕ್ಷ ರೂ. ಬೆಲೆ ಇರುವ ಕಡೆ ಐದು ಸೆಂಟ್ಸ್ ಜಾಗಕ್ಕೆ ಸುಮಾರು 33,000 ರೂ.ದವರೆಗೆ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಪರಿಷ್ಕೃತ ಆದೇಶದ ಪ್ರಕಾರ ಈ ದರ 6,800 ರೂ.ಗಳಿಗೆ ಅಂದರೆ ಸುಮಾರು 5 ಪಟ್ಟು ಕಡಿಮೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದ್ರಿ ಆದೇಶವನ್ನು ಹೊರಡಿಸುವಲ್ಲಿ ಕಾರಣೀ ಕರ್ತರಾದ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ದಕ್ಷಿಣ ಭಾಗದ ಶಾಸಕರಾದ ವೇದವ್ಯಾಸ ಕಾಮತ್, ಉತ್ತರದ ಕ್ಷೇತ್ರದ ಶಾಸಕರಾದ ಡಾ.ವೈ. ಭರತ್ ಶೆಟ್ಟಿಯವರು ಹಾಗೂ ಮೂಲ್ಕಿ ಮಾಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಇವರಿಗೆ ಧನ್ಯವಾದಗಳನ್ನು ಸಲ್ಲಿಸಲಾಗಿದೆ ಎಂದು ರವಿಶಂಕರ ಮಿಜಾರು ಹೇಳಿದ್ದಾರೆ.

Comments are closed.