ಕರಾವಳಿ

ಮಂಗಳೂರಿನ ವಿವಿಧೆಡೆಗಳಲ್ಲಿ ಬಡಾವಣೆಗಳ ಅಭಿವೃದ್ಧಿ : ಶೀಘ್ರವೇ ಕಾಮಗಾರಿ ಪೂರ್ಣ

Pinterest LinkedIn Tumblr

ಮಂಗಳೂರು : ಮಂಗಳೂರು ತಾಲೂಕಿನ ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಗ್ರಾಮದಲ್ಲಿನ ವಸತಿ ಬಡಾವಣೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿದ್ದು, ಸುಮಾರು 15 ವರ್ಷಗಳ ಬಳಿಕ ಮುಡಾದಿಂದ ಈ ಮೂರು ಬಡಾವಣೆಗಳಲ್ಲಿ ಜನರಿಗೆ ನಿವೇಶನ ಹಂಚಿಕೆಯಾಗಲಿದೆ ಎಂದು ರವಿಶಂಕರ್ ಮಿಜಾರು ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಡಾವಣೆಗೆ ಸರಕಾರದ ಆದೇಶ ಸಂಖ್ಯೆ ನಅಇ:ಮೈಅಪ್ರಾ:2015 ಬೆಂಗಳೂರು ದಿನಾಂಕ 01-06-2016 ರಂತೆ ಅನುಮೋದನೆ ಆಗಿದ್ದು, ಸುಮಾರು 10 ಕೋಟಿ 21 ಲಕ್ಷದ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಶೇ. 90% ಕಾಮಗಾರಿ ಮುಗಿದಿರುತ್ತದೆ.

ಸದರಿ ಬಡಾವಣೆಯಲ್ಲಿ ಒಟ್ಟು 135 ನಿವೇಶನಗಳಿದ್ದು ಈ ಪೈಕಿ 94 ನಿವೇಶನಗಳು ಹಂಚಿಕೆಗೆ ಲಭ್ಯವಿದ್ದು 41 ನಿವೇಶನಗಳು ಮೂಲೆ ಹಾಗೂ ಅನಿಯಮಿತ ನಿವೇಶನಗಳಾಗಿರುತ್ತವೆ. ಈ ವರ್ಷದ ಅಂತ್ಯದೊಳಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

ಮಂಗಳೂರು ತಾಲೂಕು ಕುಂಜತ್ತಬೈಲ್ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 17 ಎಕರೆ 49 ಸೆಂಟ್ಸ್ ಜಮೀನಿನಲ್ಲಿ ಬಡಾವಣೆ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ತಾಂತ್ರಿಕ ಬಿಡ್ ಅನುಮೋದನೆಯ ಹಂತದಲ್ಲಿದೆ. ಬಡಾವಣೆಯಲ್ಲಿ 140 ನಿವೇಶನಗಳಿದ್ದು, 21 ನಿವೇಶನಗಳು ಮೂಲೆ ಹಾಗೂ 23 ಅನಿಯಮಿತ ನಿವೇಶನಗಳಾಗಿರುತ್ತವೆ ಎಂದು ರವಿಶಂಕರ್ ಮಿಜಾರು ತಿಳಿಸಿದರು.

ಮಂಗಳೂರು ತಾಲೂಕು ಚೇಳ್ಯಾರ್ ಗ್ರಾಮದಲ್ಲಿ ವಿವಿಧ ಸರ್ವೆ ನಂಬ್ರಗಳಲ್ಲಿ 79 ಎಕ್ರೆ ಜಮೀನನ್ನು ಖರೀದಿಸಿದ್ದು, ಈ ಪೈಕಿ ವಸತಿ ವಲಯದಲ್ಲಿರುವ ಸುಮಾರು 45 ಎಕರೆ 85.50 ಸೆಂಟ್ಸ್ ಜಮೀನಿನಲ್ಲಿ ವಸತಿ ಬಡಾವಣೆಯನ್ನು ರಚಿಸಿದ್ದು, ಡಿಪಿಆರ್ ಅನುಮೋದನೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ.

ಸದರಿ ಬಡಾವಣೆಯಲ್ಲಿ ಒಟ್ಟು 709 ನಿವೇಶನಗಳಿದ್ದು ಈ ಪೈಕಿ 129 ಅನಿಯಮಿತ ಹಾಗೂ ಮೂಲೆ ನಿವೇಶನಗಳಾಗಿರುತ್ತವೆ. ಸದರಿ ಯೋಜನೆಗೆ ಸರಕಾರದ ಅನುಮೋದನೆ ಬಾಕಿ ಇರುತ್ತದೆ ಎಂದು ರವಿಶಂಕರ್ ಮಿಜಾರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮೂಡ ಆಯುಕ್ತರಾದ ಶ್ರೀ ದಿನೇಶ್ ಕುಮಾರ್, ಟಿಪಿಓ ಶ್ರೀ ರಘು, ಜಿಲ್ಲಾ ವಾರ್ತಾಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.