ಬೆಂಗಳೂರು: ಸುಮಾರು ಏಳು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ ಥಾವರ್ ಚಂದ್ ಗೆಹ್ಲೋಟ್ (73) ಅವರನ್ನು ನೂತನವಾಗಿ ನೇಮಿಸಲಾಗಿದೆ.

ಪ್ರಸ್ತುತ ಕೇಂದ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿರುವ ಗೆಹ್ಲೋಟ್ ಅವರು ರಾಜ್ಯಸಭೆಯಲ್ಲಿನ ಬಿಜೆಪಿ ನಾಯಕರಾಗಿದ್ದಾರೆ. ಜತೆಗೆ ಸಂಸದೀಯ ಸಮಿತಿ ಹಾಗೂ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯವರಾದ ಗೆಹ್ಲೋಟ್ ಅವರು ದಲಿತ ಕುಟುಂಬದಲ್ಲಿ 1948ರ ಮೇ 18ರಂದು ಜನಿಸಿದ್ದರು. ಬಿ.ಎ ಪದವೀಧರರಾಗಿರುವ ಅವರು, ಡಾ. ಬಿಆರ್ ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು.
8 ರಾಜ್ಯಪಾಲರ ವರ್ಗಾವಣೆ
ಮಿಜೋರಾಂ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರನ್ನು ಗೋವಾ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ. ಹರ್ಯಾಣದ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ತ್ರಿಪುರಾ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ತ್ರಿಪುರಾ ರಾಜ್ಯಪಾಲರಾಗಿದ್ದ ರಮೇಸ್ ಬೈಸ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶಕ್ಕೆ ರಾಜ್ಯಪಾಲರಾಗಿದ್ದ ಬಂಡಾರು ದತ್ತಾತ್ರೇತ ಅವರಿಗೆ ಹರ್ಯಾಣದ ಜವಾಬ್ದಾರಿ ನೀಡಲಾಗಿದೆ. ಮಿಜೋರಾಂಗೆ ನೂತನ ರಾಜ್ಯಪಾಲರಾಗಿ ಡಾ. ಹರಿ ಬಾಬು ಕಂಭಂಪಾತಿ ಅವರನ್ನು ನೇಮಿಸಲಾಗಿದೆ. ಮಧ್ಯಪ್ರದೇಶಕ್ಕೆ ಮಂಗುಭಾಯಿ ಛಂಗನ್ಭಾಯಿ ಪಟೇಲ್ ಹಾಗೂ ಹಿಮಾಚಲ ಪ್ರದೇಶಕ್ಕೆ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕದ ರಾಜ್ಯಪಾಲರಾಗಿ 7 ವರ್ಷಗಳ ಕಾಲ ಸುದೀರ್ಘಾವಧಿ ಕಾರ್ಯನಿರ್ವಹಿಸಿದ್ದ ವಜೂಭಾಯಿ ವಾಲಾ ಅವರು ಅನೇಕ ವಿವಾದಗಳಿಗೆ ಗುರಿಯಾಗಿದ್ದರು. ಸದ್ಯ ಅವರನ್ನು ಬೇರೆ ಯಾವುದೇ ರಾಜ್ಯಕ್ಕೆ ವರ್ಗಾವಣೆ ಮಾಡಿಲ್ಲ.
Comments are closed.