ಕರ್ನಾಟಕ

ಕೊರೋನಾಗೆ ಪತ್ನಿ ಬಲಿ; ಮನನೊಂದ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ

Pinterest LinkedIn Tumblr

ಬೆಂಗಳೂರು: ಕೊರೋನಾಗೆ ಪತ್ನಿ ಬಲಿಯಾಗಿದ್ದರಿಂದ ಮನನೊಂದ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.

ಅನೇಕಲ್ ತಾಲೂಕಿನ ಅತ್ತಿಬೆಲೆ ನಿವಾಸಿ 45 ವರ್ಷದ ಸತೀಶ್ ಎಂಬುವರು ತನ್ನಿಬ್ಬರು ಪುತ್ರಿಯರಾದ 18 ವರ್ಷ ಕೀರ್ತಿ ಮತ್ತು 14 ವರ್ಷದ ಮೋನಿಶಾ ಜೊತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೀರ್ತಿ ಬಿಎಸ್ಸಿ ಮೊದಲ ವರ್ಷದಲ್ಲಿ ಓದುತ್ತಿದ್ದರೆ, ಮೋನಿಷಾ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸತೀಶ್ ಈ ಹಿಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸುಮಾರು ಆರು ತಿಂಗಳ ಹಿಂದೆ ಈ ಕೆಲಸವನ್ನು ತೊರೆದು ಕೃಷಿಕರಾಗಿದ್ದರು.

ಮಂಗಳವಾರ ರಾತ್ರಿಯಿಂದ ಫೋನ್ ಕರೆಗಳಿಗೆ ಉತ್ತರಿಸದ ಕಾರಣ ಸತೀಶ್ ಅವರ ತಂದೆ ಏನಾಯ್ತು ಎಂದು ತಿಳಿಯಲು ಬೆಳಗ್ಗೆ ಮನೆಗೆ ಬಂದಿದ್ದಾರೆ. ಈ ವೇಳೆ ಮುಂಬಾಗಿಲು ತೆರೆದಿದ್ದರಿಂದ ತಂದೆ ನೇರವಾಗಿ ಮನೆಯ ಒಳಗೆ ಹೋಗಿದ್ದಾರೆ. ಈ ವೇಳೆ ಮೂವರು ಮೃತದೇಹ ನೇತಾಡುತ್ತಿರುವುದನ್ನು ಕಂಡು ಆಘಾತಗೊಂಡಿದ್ದಾರೆ. ಇನ್ನು ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಮನೆಯ ಸದಸ್ಯರನ್ನು ಕಳೆದುಕೊಂಡ ನಂತರ ಅವರು ತುಂಬಾ ಖಿನ್ನತೆಗೆ ಒಳಗಾಗಿದ್ದು ಬದುಕಬೇಕೆಂಬ ಆಸೆ ಇಲ್ಲ ಎಂಬ ಡೆಟ್ ನೋಟ್ ಗೆ ಮೂವರು ಸಹಿ ಹಾಕಿದ್ದಾರೆ.

ಸತೀಶ್ ಅವರ ಪತ್ನಿ ಆಶಾ ಸೋಂಕಿಗೆ ಒಳಗಾಗಿ ಸುಮಾರು ಎರಡು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಘಟನೆಯ ನಂತರ ತಂದೆ ಮತ್ತು ಹೆಣ್ಣುಮಕ್ಕಳು ಖಿನ್ನತೆಗೆ ಒಳಗಾಗಿದ್ದರು ಎಂದು ಸತೀಶ್ ಅವರ ಕುಟುಂಬ ಸದಸ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

Comments are closed.