ಕರಾವಳಿ

ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆಗೈದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: ಪತ್ನಿಯ ಪ್ರಿಯಕರ ಸಹಿತ ಪತ್ನಿ, ಮಗ ದೋಷಿಗಳು

Pinterest LinkedIn Tumblr

ಉಡುಪಿ:‌ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ (52) ಕೊಲೆ ಪ್ರಕರಣದ ಪ್ರಮುಖ ಮೂವರು ಅಪರಾಧಿಗಳಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ‌. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ತೀರ್ಪು ಪ್ರಕಟಿಸಿದ್ದಾರೆ.

(ಫೋಟೋ ಎಡದಿಂದ)- ನವನೀತ್ ಶೆಟ್ಟಿ, ಕೊಲೆಯಾದ ಭಾಸ್ಕರ್ ಶೆಟ್ಟಿ, ಅಪರಾಧಿಗಳಾದ ರಾಜೇಶ್ವರಿ, ನಿರಂಜನ ಭಟ್)

ಕೊಲೆಯಾದ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ , ಮಗ ನವನೀತ್ ಶೆಟ್ಟಿ, ಜ್ಯೋತಿಷಿ ನಿರಂಜನ್ ಭಟ್ ಅಪರಾಧಿಗಳಾಗಿದ್ದು ಇವರಿಗೆ ಜೀವಾವಧಿ  ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಇನ್ನು ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆರೋಪ ಹೊತ್ತಿದ್ದ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ದೊರೆತರೆ, ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ.

ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ವಿಚಾರಣೆ ಹಂತದಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು ರಾಘವೇಂದ್ರ ಜಾಮೀನು ಪಡೆದುಕೊಂಡಿದ್ದಾರೆ.

ಆರೋಪಿಗಳು 2016ರ ಜು.28ರಂದು ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಡಲಾಗಿತ್ತು. ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಈ ಕೊಲೆ ಕೃತ್ಯ ಕಂಡುಬಂದಿತ್ತು. ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ ಮತ್ತು ಆ. 8ರಂದು ನಿರಂಜನ್ ಭಟ್ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದರು.

Comments are closed.