
ಮಂಗಳೂರು, ಜೂನ್. 02: ಶಕ್ತಿನಗರ ಸಮೀಪದ ಸರಿಪಲ್ಲದ ಮನೆಯೊಂದಕ್ಕೆ 9 ಮಂದಿ ಯುವಕರು ಮಾರಕಾಸ್ತ್ರದೊಂದಿಗೆ ನುಗ್ಗಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ 7 ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರನ್ನು ಉರ್ವಸ್ಟೋರ್ನ ಸುಂಕದಕಟ್ಟೆ ನಿವಾಸಿ ಅವಿನಾಶ್ ಯಾನೆ ಅವಿ (23), ಪ್ರಜ್ವಲ್ ಯಾನೆ ಪಚ್ಚು(24), ಕೋಡಿಕಲ್ ನಿವಾಸಿ ರಂಜಿತ್ ಯಾನೆ ರಂಜು ಯಾನೆ ತಮ್ಮು (28), ದೀಕ್ಷಿತ್ ಯಾನೆ ದೀಚು(21), ಹೇಮಂತ್ ಯಾನೆ ಹೋಮು (19), ಧನು(19) ಹಾಗೂ ಯತಿರಾಜ್ ಯಾನೆ ಯತಿ(23) ಎಂದು ಹೆಸರಿಸಲಾಗಿದೆ.

ಬಂಧಿತ ಆರೋಪಿಗಳಿಂದ ಮಾರಕಾಸ್ತ್ರಗಳನ್ನು ಹಾಗೂ ದ್ವಿಚಕ್ರ ವಾಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಯುಕ್ತರು ತಿಳಿಸಿದ್ದಾರೆ.
ಮೇ 30ರಂದು ರಾತ್ರಿ 8 ಗಂಟೆಗೆ ಸರಿಪಲ್ಲದ ವೀಣಾ ತನ್ನ ಮನೆಯಲ್ಲಿದ್ದಾಗ ಆರೋಪಿಗಳು ತಲವಾರು ಸಹಿತ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಗೆ ಅಕ್ರಮವಾಗಿ ಪ್ರವೇಶಿಸಿ ವೀಣಾ ಅವರ ಇಬ್ಬರು ಮಕ್ಕಳು ಎಲ್ಲಿ ಎಂದು ಪ್ರಶ್ನಿಸಿ ಗದ್ದಲ ನಡೆಸಿದ್ದಾರೆ.
ಆರೋಪಿಗಳು ತಲವಾರು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಿ, ತಲವಾರು ಬೀಸಿದ್ದಲ್ಲದೆ, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ಪ್ರಮುಖ ಆರೋಪಿ ರಂಜಿತ್ ಎಂಬಾತ ‘ನಿಮ್ಮನ್ನು ಕೂಡಾ ಬಿಡುವುದಿಲ್ಲ’ ಎಂದು ಹೇಳಿ ಕೈಯಲ್ಲಿದ್ದ ತಲವಾರ್ ಬೀಸಿದ್ದಾನೆ. ಅಪಾಯ ಅರಿತ ವೀಣಾ ತಪ್ಪಿಸಿ ಜೋರಾಗಿ ಬೊಬ್ಬೆ ಹಾಕಿ ಹೊರಗಡೆ ಓಡಿದ್ದಾರೆ. ಇದೇ ವೇಳೆ ರಂಜಿತ್ನ ಜತೆಗಿದ್ದವರು ತಲವಾರುಗಳನ್ನು ಯದ್ವಾ-ತದ್ವಾ ಬೀಸಿ ಮನೆಯಲ್ಲಿದ್ದ ಟಿವಿ ಮಿಕ್ಸಿ, ಸೋಫಾ, ಮನೆಯ ಹಿಂಬಾಗಿಲಿಗೆ ಹಾನಿ ಮಾಡಿ ನಷ್ಟವುಂಟು ಮಾಡಿದ್ದಾರೆ.
ಈ ಸಂದರ್ಭ ಮನೆಯ ಹೊರಗಡೆ ಜನರು ಸೇರಿದ್ದು, ಇದನ್ನು ಕಂಡ ಆರೋಪಿ ರಂಜಿತ್ ‘ಮಕ್ಕಳನ್ನು ತೆಗೆಯದೇ ಬಿಡುವುದಿಲ್ಲ’ ಎಂದು ಮತ್ತೆ ಬೆದರಿಕೆ ಹಾಕಿದ್ದಾನೆ. ಬಳಿಕ ಪರಾರಿಯಾಗುವ ವೇಳೆ, ಮನೆಯ ಹೊರಗಡೆ ಜನ ಸೇರಿದ್ದನ್ನು ನೋಡಿದ ಆರೋಪಿಗಳು ಆ ಸಂದರ್ಭದಲ್ಲೂ ಬೆದರಿಕೆ ಹಾಕಿದ್ದ ಕುರಿತಂತೆ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ರಂಜಿತ್ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ. ಈತನ ವಿರುದ್ಧ ಉರ್ವ ಠಾಣೆಯಲ್ಲಿ 9, ಕಾವೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಉರ್ವ ಠಾಣೆಯಲ್ಲಿ ಅವಿನಾಶ್ ಕೂಡ ರೌಡಿಶೀಟರ್ ಆಗಿದ್ದು, ಇಲ್ಲಿ 2 ಕೇಸ್ ಇದೆ. ಪ್ರಜ್ವಲ್ ವಿರುದ್ಧ ಉರ್ವ ಮತ್ತು ಕಾವೂರು ಠಾಣೆಯಲ್ಲಿ ತಲಾ ಒಂದು ಹಲ್ಲೆ ಪ್ರಕರಣ ದಾಖಲಾಗಿದೆ.
ಇತರ ವಿರುದ್ಧವೂ ಉರ್ವ ಠಾಣೆಯಲ್ಲಿ ರೌಡಿಶೀಟ್ ಹಾಕಲಾಗಿದೆ. ದೀಕ್ಷಿತ್ ವಿರುದ್ಧ ಬರ್ಕೆಯಲ್ಲಿ ಒಂದು ಹಾಗೂ ಪಣಂಬೂರು ಠಾಣೆಯಲ್ಲಿ 2 ಕೇಸ್ ಇದೆ. ಬಂಧಿತರಿಂದ ಮಾರಕಾಸ್ತ್ರ ಹಾಗೂ ದ್ವಿಚಕ್ರ ವಾಹನ ಸ್ವಾಧೀನಪಡಿಸಲಾಗಿದೆ ಎಂದು ಅಯುಕ್ತರು ತಿಳಿಸಿದ್ದಾರೆ.
ವೀಣಾ ಅವರ ಮಗಳನ್ನು 2 ವಾರದ ಹಿಂದೆ ಮೋಟಾರ್ ಸೈಕಲ್ನಲ್ಲಿ ಕರೆದುಕೊಂಡು ಹೋಗುತ್ತಿದ್ದನ್ನು ನೋಡಿ ಸಹೋದರರಾದ ಆಕಾಶ್ ಹಾಗೂ ಕೀರ್ತನ್ ಫೋನ್ ಮಾಡಿ ಹೇಮಂತ್ನನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದಾರೆ. ಇನ್ನಿಬ್ಬರ ಬಂಧನ ಆಗಬೇಕಿದೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Comments are closed.