ಕುಂದಾಪುರ: ಕೊಲ್ಲೂರಿನಲ್ಲಿ ಶುಕ್ರವಾರ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯು.ಕೆ.ಸದಾನಂದ ಮಾಧ್ಯಮಗಳಿಗೆ ಸತ್ಯಕ್ಕೆ ದೂರವಾದ ಸುಳ್ಳು ಹಾಗೂ ಮಾನಹಾನಿಯಾಗುವಂತಹ ಹೇಳಿಕೆ ನೀಡಿದ್ದಾರೆ. ಅವರು ಮಾಡಿರುವ ಆರೋಪಗಳಿಗೂ ಹಾಗೂ ಹೇಳಿರುವ ವ್ಯಕ್ತಿಗಳಿಗೂ ನನಗೆ ಯಾವುದೆ ಸಂಬಂಧವಿಲ್ಲ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ಕುಂದಾಪುರದ ಹಿರಿಯ ವಕೀಲ ಸದಾನಂದ ಶೆಟ್ಟಿ ತಿಳಿಸಿದ್ದಾರೆ.
ಇಲ್ಲಿನ ಪ್ರೆಸ್ ಕ್ಲಬ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ದಾಖಲೆ ಸಹಿತ ಆರೋಪಗಳಿಗೆ ಸ್ವಷ್ಟನೆ ನೀಡಿದರು.

(ವಕೀಲ ಸದಾನಂದ ಶೆಟ್ಟಿ)
36 ವರ್ಷದಿಂದ ಪ್ರಾಮಾಣಿಕವಾಗಿ ವಕೀಲ ವೃತ್ತಿ ಮಾಡುತ್ತಿರುವೆ. ನಾನು ಯಾವುದೆ ಬಡ್ಡಿ ವ್ಯವಹಾರವನ್ನು ನಡೆಸುತ್ತಿಲ್ಲ. ಸದಾನಂದ ಅವರಿಗೆ ಬಡ್ಡಿಯ ಮೇಲೆ ಯಾವುದೆ ಹಣವನ್ನು ನೀಡಿಲ್ಲ ಹಾಗೂ ಅವರಿಂದ ಯಾವುದೆ ಬಡ್ಡಿ ಹಣವನ್ನು ಪಡೆದಿಲ್ಲ. ಅವರಿಂದ ಯಾವುದೇ ಖಾಲಿ ಚೆಕ್ ಹಾಗೂ ಸಹಿ ಮಾಡಿರುವ ಖಾಲಿ ಕಾಗದವನ್ನು ಪಡೆಕೊಳ್ಳದೆ ಇರುವಾಗ ಬೇರೆಯವರಿಗೆ ನಾನು ಅವರ ಖಾಲಿ ಚೆಕ್ ನೀಡುವ ಸಂದರ್ಭವೇ ಬರುವುದಿಲ್ಲ ಎಂದು ಸ್ವಷ್ಟ ಪಡಿಸಿದ. ಆರೋಪಿಸಿದಂತೆ ಅವರು ಬೇರೆ ವ್ಯಕ್ತಿಯೊಂದಿಗೆ ಅವರು ಮಾಡಿಕೊಂಡಿರುವ ವ್ಯವಹಾರಕ್ಕೂ ನನಗೂ ಯಾವುದೆ ಸಂಬಂಧ ಅಥವಾ ಮಾಹಿತಿ ಇಲ್ಲ ಎಂದಿದ್ದಾರೆ.

(ಸದಾನಂದ ಉಪ್ಪಿನಕುದ್ರು)
2015 ರಿಂದ ಕಟ್ಟಡ ಬಾಡಿಗೆ ವ್ಯವಹಾರದ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ವ್ಯವಹಾರದ ರೀತಿಯಲ್ಲಿ ಇನ್ನೊಬ್ಬರ ಮೂಲಕ ಪರಿಚಯವಾಗಿತ್ತು. 2018 ರ ಜ.22 ರಂದು 50 ಸೆಂಟ್ಸ್ ಜಾಗ ಮಾರಾಟ ಮಾಡುವ ಕುರಿತು ಲಿಖಿತ ಕರಾರು ಮಾಡಿಕೊಟ್ಟು ನಾನು, ನನ್ನ ಹೆಂಡತಿ, ಹೆಂಡತಿಯ ಸಹೋದರ ಹಾಗೂ ಸಹೋದರನ ಹೆಂಡತಿಯಿಂದ ಒಟ್ಟು 40 ಲಕ್ಷ ಪಡೆದುಕೊಂಡು ಹಣ ಪಡೆದಿರುವ ಕುರಿತು ರಶೀದಿಯನ್ನು ನೀಡಿದ್ದರು. ನಂತರ ಆ ಜಾಗವನ್ನು ಕರಾರು ಪ್ರಕಾರ ಮಾರಾಟ ಮಾಡುವುದಿಲ್ಲ, ಹಣವನ್ನು ಮರು ಪಾವತಿಸುವುದಾಗಿ ತಿಳಿಸಿ ಮೊದಲಿಗೆ 10 ಲಕ್ಷ ರೂ. ಬ್ಯಾಂಕ್ ಚೆಕ್ ಮುಖಾಂತರ ಪಾವತಿಸಿದ್ದರು. ಉಳಿದ ಹಣ ಪಾವತಿಗಾಗಿ ನೀಡಿರುವ 15 ಹಾಗೂ 10 ಲಕ್ಷ ಮೌಲ್ಯದ 2 ಚೆಕ್ಗಳು ಅಮಾನ್ಯವಾಗಿದ್ದರಿಂದ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗಿದೆ. ನಂತರ ಹಣ ಪಾವತಿಗೆ ಒಪ್ಪಿದ ಅವರು 2018 ನೇ ಡಿ.10 ರಂದು 5 ಲಕ್ಷ ರೂ. ಗಳನ್ನು ಬ್ಯಾಂಕ್ ಚೆಕ್ ಮೂಲಕ ಪಾವತಿಸಿದ್ದಾರೆ. ಒಟ್ಟು 15 ಲಕ್ಷ ಹಣ ಮಾತ್ರವೇ ಅವರು ವಾಪಾಸ್ ನೀಡಿದ್ದು ಉಳಿದ ಹಣ ಬಾಕಿಯಾಗಿದೆ. ಅವರು ಬಿಜೆಪಿ ನಾಯಕನಾಗಿ ಗುರುತಿಸಿಕೊಂಡಿದ್ದರಿಂದ ಹಣಕಾಸಿನ ವಿಚಾರದಲ್ಲಿ ಬಿಜೆಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಮಾತುಕತೆ ನಡೆದರೂ ಕೂಡ ಅದು ಫಲಪ್ರದವಾಗಿಲ್ಲ. ನಾನು ಅವರಿಂದ 48 ಲಕ್ಷ ರೂ. ಪಡೆದಿದ್ದೇನೆ ಎನ್ನುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಸದಾನಂದ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಉಳಿದ ಹಣದ ಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದ ಅವರು ಸಂಬಂಧಪಟ್ಟ ಜಾಗದಲ್ಲಿ ಇರುವ ಕಟ್ಟಡವನ್ನು ಆಕ್ರಮ ಲಾಭ ಮಾಡುವ ಉದ್ದೇಶದಿಂದ ಸಂಬಂಧಿಯ ಸಹಿ ಪೋರ್ಜರಿ ಮಾಡಿ ರಾಜಸ್ಥಾನ ಮೂಲದವರಿಗೆ ಬಾಡಿಗೆಗೆ ನೀಡಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
Comments are closed.