ಕರಾವಳಿ

ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರೋಪದ ಸತ್ಯಾಸತ್ಯತೆ ಕೊಲ್ಲೂರು ಮೂಕಾಂಬಿಕೆ ಚಿತ್ತಕ್ಕೆ ಬಿಡುವೆ: ಶಾಸಕ ಸುಕುಮಾರ್ ಶೆಟ್ಟಿ

Pinterest LinkedIn Tumblr

ಉಡುಪಿ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಶುಕ್ರವಾರದಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹಾಗೂ ಇತರರ ವಿರುದ್ಧ ಕಿರುಕುಳದ ಆರೋಪ ನೀಡಿದ್ದು ಅದಕ್ಕೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ನಾನು ಬದುಕಿನಲ್ಲಿ ಪ್ರಾಮಾಣಿಕವಾಗಿ ಆರಾಧಿಸಿ ಸರ್ವಸ್ವವೆಂದು ನಂಬಿಕೊಂಡು ಬಂದ ಜಗನ್ಮಾತೆ ತಾಯಿ ಮೂಕಾಂಬಿಕೆ ಸನ್ನಿಧಾನದಲ್ಲಿ ನನ್ನ ಬಗೆಗೆ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ಈ ಎಲ್ಲಾ ಆರೋಪಗಳ ಸತ್ಯಾಸತ್ಯೆಯನ್ನು ತಾಯಿ ಮೂಕಾಂಬಿಕೆಯ ಚಿತ್ತಕ್ಕೆ ಬಿಡುತ್ತೇನೆ ಎಂದಿದ್ದಾರೆ.

ಅವರು ಅರ್ಥಿಕ ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಪೆಬ್ರವರಿ 2018ರ ಸಮಯದಲ್ಲಿ ಸ್ವಲ್ಪ ನಗದು ಹಣವನ್ನು ಮತ್ತು ಚೆಕ್ ಮೂಲಕ ಐದು ಲಕ್ಷ ಹಣವನ್ನು ನೀಡಿದ್ದೇನೆ. ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದರ ಬಗ್ಗೆ ನನ್ನ ಬಳಿ ದಾಖಲೆ ಇದ್ದು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಶ್ರೀ ಕ್ಷೇತ್ರ ಕೊಲ್ಲೂರಿನ ಪಾವಿತ್ರ್ಯಕ್ಕೆ ಧಕ್ಕೆ ತರುವಂತೆ ಆಣೆ ಪ್ರಮಾಣದ ಮಾತನಾಡಿರುವ ಸದಾನಂದ ಉಪ್ಪಿನಕುದ್ರು ಮತ್ತು ಅವರ ಕುಟುಂಬದವರೇ ಕೊಲ್ಲೂರು ಮೂಕಾಂಬಿಕೆಯಲ್ಲಿ ನಿಂತು ನನ್ನಿಂದ ಹತ್ತು ಲಕ್ಷ ಹಣವನ್ನು ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ನಾನು ನೀಡಿರುವ ಹಣ ಅದು ನನ್ನ ಶ್ರಮದ ಗಳಿಕೆ. ಹಾಗಾಗಿ ಅದನ್ನು ವಾಪಾಸು ಕೇಳಿದ್ದು ನಾನಿಂದು ಕೆಟ್ಟವನಾಗಲು ಕಾರಣವಾಯಿತು. ನನ್ನ ವಿರುದ್ದ ಬಂದಿರುವ ಆರೋಪದ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವೇ ಇರುವುದು ನನ್ನ ಗಮನಕ್ಕೆ ಬಂದಿದ್ದು, ಈ ಎಲ್ಲಾ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ.

ನಾನು ಎಷ್ಟು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಏನೆಲ್ಲ ಜನ ಪರವಾದ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ . ಹಾಗೂ ಯಾವ ವೈಯಕ್ತಿಕ ಲಾಭ ಇಲ್ಲದೇ , ನಮ್ಮ ಜನರ ಹಿತಕ್ಕಾಗಿ ಅಧಿಕಾರಗಳ ಜೊತೆ ಮಾತನಾಡಿದ್ದೇನೆ ಎಂಬುದು ನಮ್ಮ ಪಕ್ಷದ ಎಲ್ಲಾ ನಾಯಕರಿಗೂ , ಕಾರ್ಯಕರ್ತರಿಗೂ ಹಾಗೂ ಮತದಾರರಿಗೆ ತಿಳಿದಿದೆ.

ನಾನು ಬೈಂದೂರು ಶಾಸಕನಾಗಿ ಆಯ್ಕೆಯಾಗುವಲ್ಲಿ ಅನೇಕ ಕಾರ್ಯಕರ್ತ ಬಂಧುಗಳು ಶ್ರಮಿಸಿದ್ದಾರೆ. ಇಂದಿಗೂ ಕೆಲವರು ತೆರೆಮರೆಯಲ್ಲಿ ಇದ್ದು ಪಕ್ಷ ಸಂಘಟಿಸುತಿದ್ದಾರೆ. ಆದರೆ ಮಂಡಲ ಅಧ್ಯಕ್ಷರಾಗಿದ್ದ ಇವರು ಕಾಮಗಾರಿಗಾಗಿ ಬೇಡಿಕೆಯನ್ನು ಇಟ್ಟಿದ್ದರು. ನಾವು ಮೂರುವರೆ ಕೋಟಿ ರೂಪಾಯಿಗಳ ಕಾಮಗಾರಿ ಅವರಿಗೆ ನೀಡಿದ್ದೆವು‌. ಆದರೆ ಅವರು ಹತ್ತು ಕೋಟಿ ರೂಪಾಯಿಗಳ ಕಾಮಗಾರಿ ಬೇಕೆಂದು ಪಟ್ಟು ಹಿಡಿದರು. ಅದನ್ನು ನೀಡುವಲ್ಲಿ ನಮಗೆ ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ಮುನಿಸಿಕೊಂಡ ಅವರು ನಂತರ ನನ್ನನ್ನು ಬೇಟಿ ಆಗಲಿಲ್ಲ. ಆದರೆ ಇದ್ದಕಿದ್ದಂತೆ ನನ್ನ ಮೇಲೆ ಅಪಪ್ರಚಾರಗಳನ್ನು ಶುರುವಿಟ್ಟುಕೊಂಡರು. ಅದನ್ನೆಲ್ಲ ಸಹಿಸಿಕೊಂಡ ನಾನು , ಕಳೆದ ಆರು ತಿಂಗಳ ಹಿಂದೆ ಕೊಟ್ಟ ಹಣವನ್ನು ಕೇಳಿ ವಾಪಾಸು ನೀಡದಿದ್ದಾಗ ದಾಖಲೆಗಳೊಂದಿಗೆ ಪ್ರಕರಣ ದಾಖಲಿಸಿರುತ್ತೇನೆ.

ಅವರು ಅನೇಕ ವ್ಯವಹಾರಗಳನ್ನು ಮಾಡಿ ನಷ್ಟ ಅನುಭವಿಸಿದ್ದಾರೆ. ಇದಕ್ಕೆಲ್ಲಾ ಪಕ್ಷದ ಕಾರ್ಯಕ್ರಮ ಹಾಗೂ ನಮಗೂ ಸಂಬಂಧ ಕಲ್ಪಿಸಿದರೇ ಅದಕ್ಕೆಲ್ಲಾ ನಾನು ಹೊಣೆಗಾರನಲ್ಲ. ಆದ್ದರಿಂದ ನಮ್ಮ ಕಾರ್ಯಕರ್ತ ಬಂಧುಗಳು ಇಂತಹ ಸುಳ್ಳು ಆರೋಪಗಳಿಗೆ ಕಿವಿಕೊಡಬಾರದು. ಅದನ್ನೆಲ್ಲ ಮೂಕಾಂಬಿಕೆಯ ಪದತಲಕ್ಕೆ ಅರ್ಪಿಸಿ, ಅವರಿಗೆ ಮೂಕಾಂಬಿಕೆ ಸದ್ಬುದ್ದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

Comments are closed.