ಕರಾವಳಿ

ಕೊರೋನ ನೈಟ್ ಕರ್ಫ್ಯೂ ಪೊಲೀಸ್ ಕಾರ್ಯಾಚರಣೆ : ಮಂಗಳೂರಿನಲ್ಲಿ ವ್ಯಾಪಕ ಬಂದೋಬಸ್ತ್ : 45 ಚೆಕ್‌ಪೋಸ್ಟ್‌ಗಳ ನಿರ್ಮಾಣ 

Pinterest LinkedIn Tumblr

ಮಂಗಳೂರು, ಎಪ್ರಿಲ್. 10: ರಾಜ್ಯ ಸರಕಾರದ ಸೂಚನೆಯಂತೆ ದ.ಕ. ಜಿಲ್ಲಾಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನೈಟ್ ಕರ್ಫ್ಯೂ ಹಿನ್ನಲೆ ಏಪ್ರಿಲ್ 10 ರಿಂದ 20 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಮಂಗಳೂರಿನಲ್ಲಿ 45 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಿ ಬಂದೋಬಸ್ತ್ ಮಾಡಲಾಗುತ್ತಿದೆ.

ಮನಪಾ ಹೊರ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿಯೂ ಸುಗಮ ಸಂಚಾರವನ್ನು ಖಾತರಿಪಡಿಸಲು ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗುತ್ತಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಪಿಎಸ್‌ಐಗಿಂತ ಹೆಚ್ಚಿನ ದರ್ಜೆಯ ಅಧಿಕಾರಿಯನ್ನು ಒಳಗೊಂಡು ಅಗತ್ಯಕ್ಕೆ ತಕ್ಕುದಾಗಿ 8ರಿಂದ 10 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇಲಾಖೆಯ ಶೇ.70ರಷ್ಟು ಸಿಬ್ಬಂದಿಯನ್ನು ಕೊರೋನ ನೈಟ್ ಕರ್ಫ್ಯೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಅಗತ್ಯ ಸೇವೆಗಳು ಮತ್ತು ಸೇವೆಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ.

ರಾತ್ರಿ ಪಾಳಿಯಲ್ಲಿರುವ ಕಂಪೆನಿಗಳಲ್ಲಿ ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರು ರಾತ್ರಿ 10 ಕ್ಕಿಂತ ಮೊದಲು ತಮ್ಮ ಕೆಲಸದ ಸ್ಥಳವನ್ನು ತಲುಪಬೇಕು ಮತ್ತು ಬೆಳಿಗ್ಗೆ 5 ಗಂಟೆಯ ನಂತರ ಮಾತ್ರ ಕೆಲಸದ ಸ್ಥಳವನ್ನು ತೊರೆಯಬೇಕು. ಕೇವಲ, ಅಗತ್ಯ ಸೇವೆಗಳು ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪ್ರಯಾಣಿಸುವ ಜನರಿಗೆ ರಾತ್ರಿ ವಿನಾಯಿತಿ ನೀಡಲಾಗಿದೆ.

ಕರ್ಫ್ಯೂ ಅವಧಿಯಲ್ಲಿ ಮನಪಾ ವ್ಯಾಪ್ತಿಯೊಳಗೆ ಅನಗತ್ಯ ವಾಹನಗಳ ಸಂಚಾರ, ಜನರ ಓಡಾಟ ಕಂಡುಬಂದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ವಾಹನ ಜಪ್ತಿ ಮಾಡುವ ಕಾರ್ಯವನ್ನು ಮಾಡಲಾಗುವುದು. ಹಾಲು, ಪೇಪರ್ ತರುವ ನೆಪದಲ್ಲಿಯೂ ಸಾರ್ವಜನಿಕರು ಯಾರೂ ಈ ಕರ್ಫ್ಯೂ ಅವಧಿಯಲ್ಲಿ ಓಡಾಡುವಂತಿಲ್ಲ ಎಂದು ಕಮಿಷನರ್ ಹೇಳಿದರು.

ಪಬ್, ಬಾರ್, ರೆಸ್ಟೋರೆಂಟ್‌ ಬಂದ್ :

ಪಬ್‌ಗಳು, ಬಾರ್, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳನ್ನು ರಾತ್ರಿ 10ಕ್ಕಿಂತ ಮೊದಲು ಮುಚ್ಚಬೇಕು ಮತ್ತು ನೌಕರರು ರಾತ್ರಿ 10 ರ ಮೊದಲು ತಮ್ಮ ಮನೆಗಳಿಗೆ ಮರಳಬೇಕು. ವಿಮಾನ, ರೈಲು ಮತ್ತು ಬಸ್ ಮೂಲಕ ನಗರಕ್ಕೆ ಪ್ರಯಾಣಿಸುವ ಜನರು ಪ್ರಯಾಣಿಸ ಬಹುದು, ಆದರೆ ಚೆಕ್ ಪೋಸ್ಟ್‌ಗಳಲ್ಲಿ ನಿಲ್ಲಿಸಿದಾಗ ಅವರು ಟಿಕೆಟ್ ಅನ್ನು ಪೊಲೀಸರಿಗೆ ನೀಡಬೇಕು ಎಂದು ಪೊಲೀಸ್ ಆಯುಕ್ತರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

Comments are closed.