ಕರಾವಳಿ

ರಾತ್ರಿ ಕರ್ಫ್ಯೂ ಎನ್ನುವುದೆ ಒಂದು ಹಾಸ್ಯಾಸ್ಪದ ಪದ: ಸಂಸದ ಡಿ.ಕೆ. ಸುರೇಶ್ (Video)

Pinterest LinkedIn Tumblr

ಕುಂದಾಪುರ: ರಾತ್ರಿ ವೇಳೆ ಕೇವಲ ಶೇ.1ರಷ್ಟು ಜನ ಮಾತ್ರ ಓಡಾಡುತ್ತಿದ್ದು, ಉಳಿದ ಶೇ.99 ರಷ್ಟು ಮಂದಿ ದಿನಪೂರ್ತಿ ಚಟುವಟಿಕೆ ನಡೆಸುತ್ತಾರೆ. ಅವರ ಕಾರ್ಯಚಟುವಟಿಕೆ ಮೇಲೆ ನಿಗಾ ವಹಿಸುವಂತಹ ಆದೇಶ ತರಬೇಕಿತ್ತೇ ಹೊರತು ರಾತ್ರಿ ನಿರ್ಬಂಧ ಹೇರುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ರಾತ್ರಿ ಕರ್ಪ್ಯೂ ಎನ್ನೋದೆ ಒಂದು ಹಾಸ್ಯಾಸ್ಪದ ಪದ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ಸಂಸದ ಡಿ.ಕೆ.ಸುರೇಶ್‌ ಸರಕಾರದ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ.

ಶನಿವಾರ ಉಡುಪಿ ಜಿಲ್ಲೆಯಿಂದ ಭಟ್ಕಳ ತನಕ ಮೀನುಗಾರರ ಚಟುವಟಿಕೆಗಳನ್ನು ವೀಕ್ಷಿಸಲು ಮೀನುಗಾರರೊಂದಿಗೆ ಬೋಟ್‌ನಲ್ಲಿ ತೆರಳಿ ದಾರಿಯ ಮಧ್ಯದಲ್ಲಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದ ಅವರು ಗಂಗೊಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದರು.

ದಿನವೆಲ್ಲಾ ಎಲ್ಲಾ ಚಟುವಟಿಕೆಗೆ ಅವಕಾಶ ನೀಡಿ ರಾತ್ರಿ ಮಾತ್ರ ನಿರ್ಬಂಧ ಮಾಡೋದರಿಂದ ಕೊರೊನಾ ಹೇಗೆ ತಡೆಗಟ್ಟುತ್ತಾರೋ ಗೊತ್ತಿಲ್ಲ. ದೈನಂದಿನ ಚಟುವಟಿಕೆಗಳಿಗೆ ತೊಡಕಾಗದಂತೆ ಕನಿಷ್ಠ 4 ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ, ಜನ ಸೇರುವ ಕಾರ್ಯಕ್ರಮ ಮಾಡುವಂತಿಲ್ಲ ಎನ್ನುವುದನ್ನು ಕಡ್ಡಾಯಗೊಳಿಸಿ ವಾಣಿಜ್ಯ ಹಾಗೂ ಇತರ ಚಟುವಟಿಕೆಗಳಲ್ಲಿ ತಜ್ಞರ ಸಲಹೆಗಳನ್ನು ಪಾಲಿಸಲು ಒತ್ತು ನೀಡಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬಹುದಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಸರಕಾರದ ಗಮನ ಸೆಳೆಯುವಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ದರ್ಬಾರನ್ನು ಅಡ್ಡಹಾಕಲು‌ ಆಗುತ್ತೇನ್ರೀ ಎಂದರು.

ಸಾಹಸಮಯವಾದ ಜೀವನ ನಡೆಸುತ್ತಿರುವ ಲಕ್ಷಾಂತರ ಮಂದಿ ಮೀನುಗಾರರ ಕುಟುಂಬ ಕಷ್ಟದ ಜೀವನ ನಡೆಸುತ್ತಿದ್ದಾರೆ. ತೈಲ ಬೆಲೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಸಂಕಷ್ಟ ಒಂದೆಡೆಯಾದರೆ, ಮೀನುಗಾರಿಕೆಯಲ್ಲಿಯೂ ಕೂಡ ಈಚೀನ ದಿನಗಳಲ್ಲಿ ಸಣ್ಣ ಪುಟ್ಟ ಮೀನುಗಳನ್ನು ಹೊರತು ಪಡಿಸಿ, ದೊಡ್ಡ ಆದಾಯ ತರುವ ಯಾವುದೆ ಮೀನುಗಳು ದೊರಕುತ್ತಿಲ್ಲ ಎನ್ನುವುದನ್ನು ಕರಾವಳಿಯ ಮೀನುಗಾರ ಬಂಧುಗಳು ಹೇಳುತ್ತಿದ್ದಾರೆ. ಸಮಾಜದ ಎಲ್ಲಾ ವರ್ಗದ ಬಂಧುಗಳ ಮೇಲೂ ನಿರ್ಬಂಧ ಹೇರಲಾಗುತ್ತಿದೆ. ಮೀನುಗಾರ ಬಂಧುಗಳು ಕೊರೊನಾ ಕಾರಣಗಳಿಂದಾಗಿ ಕಳೆದ ಒಂದು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಯಾವುದೆ ರೀತಿಯ ನಿರೀಕ್ಷಿತ ನೆರವು ಸಿಗಲಿಲ್ಲ ಎನ್ನುವು ನೋವು ಇದ್ದು, ಈ ಭಾಗದ ಪ್ರಭಾವಿ ಜನಪ್ರತಿನಿಧಿಗಳು ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು. ಮುಂಬರುವ ದಿನಗಳಲ್ಲಿ ಮೀನುಗಾರರ ಸಮಸ್ಯೆಗಳ ಕುರಿತು ಲೋಕಸಭೆಯಲ್ಲಿ ಅವಕಾಶ ದೊರೆಕಿದಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.

ಮತ ಯಂತ್ರಗಳನ್ನು ಬಿಜೆಪಿಯವರು ಯಾವ ರೀತಿ ದುರ್ಬಳಿಕೆ ಮಾಡ್ತಾ ಇದ್ದಾರೆ ಎನ್ನುವುದನ್ನು ಹೇಳಲು ಜನರು ಕಾಯ್ತಾ ಇದ್ದಾರೆ. ಎಲ್ಲಿ ಸತ್ಯ ಹೇಳಲು ಹೊರಟರೇ ನಮ್ಮ ವಿರುದ್ಧ ಯಾವ ಕೇಸು ದಾಖಲಿಸುತ್ತಾರೋ ಎನ್ನುವ ಭಯದ ವಾತಾವರಣ ಇದೆ. ಮುಂದಿನ 2 ವರ್ಷಗಳು ಮುಗಿದ ಬಳಿಕ ಈ ದೇಶದ ಹಾಗೂ ನಮ್ಮ ರಾಜ್ಯದ ಚಿತ್ರಣ ಬದಲಾಗಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಫಲಿತಾಂಶ ಬರುವುದಾಗಿ ತಿಳಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ ಪೂಜಾರಿ ಬೀಜಾಡಿ, ಮೀನುಗಾರ ಮುಖಂಡರಾದ ಸುರೇಶ್ ಚಾತ್ರಬೆಟ್ಟು, ಬೋಟ್ ಚಾಲಕ ಶಂಕರ್ ಪೂಜಾರಿ, ಅನಿಲ್ ಚಾತ್ರಬೆಟ್ಟು, ಸುನೀಲ್ ಚಾತ್ರಬೆಟ್ಟು, ಅಂಸದರ ಆಪ್ತರಾದ ಸ್ಕಂದ ಶ್ರೀನಿವಾಸ್,ಸುಜಯ್ ಕುಮಾರ್, ರಘುನಂದನ್ ರಾಮಣ್ಣ, ಕೆಪಿಸಿಸಿ ಸದಸ್ಯ ವಿನೋದ್ ಕುಮಾರ್ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.