ಕರ್ನಾಟಕ

ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೊಳಪಡಿಸಿದ ಎಸ್ಐಟಿ ತಂಡ

Pinterest LinkedIn Tumblr

ಬೆಂಗಳೂರು: ಪತ್ರಕರ್ತ ನರೇಶ್ ಗೌಡ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಎಸ್ಐಟಿ ಅಧಿಕಾರಿಗಳು ಶುಕ್ರವಾರ ವಿಚಾರಣೆಗೊಳಪಡಿಸಿದ್ದು, ವಿಚಾರವಣೆ ವೇಳೆ ಯಾವುದೇ ರೀತಿ ಮಹತ್ವದ ಸುಳಿವುಗಳೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ನೋಟಿಸ್ ಹಿನ್ನೆಲೆಯಲ್ಲಿ ಮಡಿವಾಳದಲ್ಲಿರುವ ವಿಚಾರಣಾ ಕೇಂದ್ರದಲ್ಲಿ ತನಿಖಾಧಿಕಾರಿ, ಸಿಸಿಬಿ, ಎಸಿಪಿ ಹೆಚ್.ಎನ್.ಧರ್ಮೇಂದ್ರ ಅವರ ಮುಂದೆ ರಮೇಶ್ ಜಾರಕಿಹೊಳಿಯವರು ವಿಚಾರಣೆಗೆ ಹಾಜರಾದರು. ಸುಮಾರು 3 ಗಂಟೆಗಳಿಗೂ ಹೆಚ್ಚು ಹೊತ್ತು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಸಿಡಿ ಸ್ಫೋಟದ ತಂಡದಿಂದ ನಿಜಕ್ಕೂ ಬ್ಲ್ಯಾಕ್ ಮೇಲ್ ನಡೆದಿತ್ತೇ? ಯುವತಿ ತಮಗೆ ಪರಿಚಯವಿಲ್ಲವೇ? ಸಿಡಿ ಸ್ಫೋಟದ ಸೂತ್ರದಾರರು ಯಾವಾಗ ಸಂಪರ್ಕಿಸಿದ್ದರು? ಹೀಗೆ ನೂರಾರು ಪ್ರಶ್ನಗಳನ್ನು ಹಾಕಿ ಮಾಜಿ ಸಚಿವರಿಂದ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರಂದು ಮೂಲಗಳು ತಿಳಿಸಿವೆ.

ವಿಚಾರಣೆಗೆ ಹಾಜರಾಗುವಂತೆ ಜಾರಕಿಹೊಳಿಯವರಿಗೆ ಸಮನ್ಸ್ ಜಾರಿ ಮಡಾಲಾಗಿತ್ತು. ಇದರಂತೆ ವಿಚಾರಣೆಗೆ ಹಾಜರಾಗಿದ್ದರು. ಮೂರು ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಲಾಗಿತ್ತು. ಕೆಲವು ಮಾಹಿತಿಗಳನ್ನು ಜಾರಕಿಹೊಳಿಯವರು ಬಹಿರಂಗಪಡಿಸಿದ್ದಾರೆ. ತನಿಖೆಗೆ ಅಗತ್ಯವೆನಿಸಿದರೆ ಮತ್ತೆ ವಿಚಾರಣೆಗೊಳಪಡಿಸುತ್ತೇವೆಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮಾಜಿ ಸಚಿವರು ನೀಡಿರುವ ಹೇಳಿಕೆ ಹಾಗೂ ಮಾಹಿತಿಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಎಸ್ಐಟಿ ತಾಂತ್ರಿ ತಂಡ ಜಾರಕಿಹೊಳಿಯವರನ್ನು ವಿಚಾರಣೆ ನಡೆಸಿದೆ. ಪ್ರಕರಣ ಸಂಬಂಧ ಸಂಪರ್ಕ ಹೊಂದಿರುವ ಇನ್ನೂ ನಾಲ್ಕು ಜನರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಡಿಯಲ್ಲಿರುವ ಮಹಿಳೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಮಹಿಳೆ ಹಾಗೂ ಆಕೆಯ ಕುಟುಂಬಕ್ಕೆ ಈಗಾಗಲೇ ಮೂರು ನೋಟಿಸ್ ಗಳನ್ನೂ ಜಾರಿ ಮಾಡಲಾಗಿದೆ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.

ಈ ನಡುವೆ ವಿಡಿಯೋ ಬಿಡುಗಡೆ ಮಾಡಿರುವ ನರೇಶ್ ಗೌಡಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹುಡುಕಾಟ ಮುಂದುವರೆಸಿದ್ದಾರೆ. ನರೇಶ್ ಸಂಬಂಧಿಕರು ನೀಡಿರುವ ಮಾಹಿತಿ ಅನ್ವಯ ಪೊಲೀಸ್ ಅಧಿಕಾರಿಗಳು ನರೇಶ್ ಗಾಗಿ ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿ ಹುಡುಕಾಟ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಪ್ರಕರಣ ಸಂಬಂಧ ಡಿಸಿಪಿ ಮತ್ತು ಎಸಿಪಿಗಳು ಸೇರಿ ಒಟ್ಟು 40 ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ವರೆಗೂ ಯಾವುದೇ ರೀತಿ ದೊಡ್ಡ ಮಟ್ಟದ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ನಡುವೆ ಎಸ್ಐಟಿ ವಶದಲ್ಲಿದ್ದ 6 ಮಂದಿಯನ್ನು ಶುಕ್ರವಾರ ಮನೆಗೆ ಕಳುಹಿಸಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ನಗರ ಬಿಟ್ಟು ಹೊರಹೋಗದಂತೆ ಸೂಚನೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಇವರು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆಂದು ಹೇಳಲಾಗುತ್ತಿದೆ.

ಇನ್ನು ಪ್ರಕರಣದ ಸಿಡಿಯನ್ನು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಯವರಿಗೆ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯ ವಿವರಗಳನ್ನು ಎಸ್ಐಟಿ ಪರಿಶೀಲನೆ ನಡೆಸಿದ್ದು, ಬ್ಯಾಂಕ್ ಖಾತೆಯಲ್ಲಿ ಯಾವುದೇ ರೀತಿ ಹಣ ವರ್ಗಾವಣೆಗಳಾಗಿರುವುದು ಕಂಡು ಬಂದಿಲ್ಲ ಎಂದು ವರದಿಗಳು ತಿಳಿಸಿವೆ.

Comments are closed.