ಕರಾವಳಿ

ದ.ಕ ಹಾಗೂ ಉಡುಪಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಅಧ್ಯಯನಕ್ಕೆ ನಬಾರ್ಡ್ ತಂಡ ಜಿಲ್ಲೆಗೆ ಆಗಮನ

Pinterest LinkedIn Tumblr

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಅನೇಕ ಸಾಧನೆಗಳನ್ನು ಮಾಡಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿದೆ. ವೈವಿಧ್ಯಮಯ ಸಹಕಾರ ಕ್ಷೇತ್ರವನ್ನು ಹೊಂದಿರುವ ಜಿಲ್ಲೆಯ ಸಹಕಾರ ಸಂಘಗಳ ಆರ್ಥಿಕ ಸ್ಥಿತಿಗತಿ, ಸಹಕಾರ ಕ್ಷೇತ್ರದ ಹುಟ್ಟು, ಬೆಳವಣಿಗೆ ಸಾಧನೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಲು ನಬಾರ್ಡ್ ನಿಯೋಜಿತ ಅಧ್ಯಯನ ತಂಡವು ಮಾರ್ಚ್19-20ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ.

ಇಂದು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ (ಎಸ್‌ಸಿಡಿಸಿಸಿ ಬ್ಯಾಂಕ್) ಭೇಟಿ ನೀಡಿರುವ ಅಧ್ಯಯನ ತಂಡದ ನೇತೃತ್ವವನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬೆಳ್ಳಿ ಪ್ರಕಾಶ್ ಇವರು ವಹಿಸಿಕೊಂಡಿದ್ದಾರೆ. ನಬಾರ್ಡ್ ನಿಯೋಜಿತ ಈ ಅಧ್ಯಯನ ತಂಡದಲ್ಲಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ಜಿ.ಡಿ ಹರೀಶ್, ಬಾಗಲಕೋಟೆ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಜಯ ಕುಮಾರ್ ಸರ್‌ನಾಯ್ಕ, ಕಲ್ಬುರ್ಗಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ರಾಜ್ ಕುಮಾರ್ ಪಾಟೀಲ್, ಮಂಡ್ಯ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಸಿ. ಅಶ್ವತ್, ಬೆಂಗಳೂರು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಡಿ. ಹನುಮಂತಯ್ಯ, ದಾವಣಗೆರೆ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀಜಗದೀಶಪ್ಪ ಬಣಕಾರ್, ಧಾರವಾಡ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಲಿಂಗರಾಜ ಎಸ್. ಚಪ್ಪರದಳ್ಳಿ, ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಚೆನ್ನವೀರಪ್ಪ, ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಿ.ಎನ್ ದೇವರಾಜ್, ನಬಾರ್ಡ್ ಜಂಟಿ ನಿರ್ದೇಶಕ ಶ್ರೀ ಅರುಣ್ ತಲ್ಲೂರು, ನಬಾರ್ಡ್ ಡಿಡಿ‌ಎಮ್ ಸಂಗೀತ ಕರ್ತ, ಅಪೆಕ್ಸ್ ಬ್ಯಾಂಕಿನ ಮುಖ್ಯಮಹಾಪ್ರಬಂಧಕರಾದ ಶ್ರೀ ಎನ್.ಎಸ್ ಕೃಷ್ಣಮೂರ್ತಿ, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಮಂಚಪ್ಪಯ್ಯ, ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಎಚ್.ಕೆ, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹಾಬಲ, ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮೇಘರಾಜ್, ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ಎಲ್. ಜಗದೀಶ್ ಇವರು ಇಂದು ಬ್ಯಾಂಕಿಗೆ ಭೇಟಿ ನೀಡಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್‌ರವರು ತಿಳಿಸಿದ್ದಾರೆ.

ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಚ್-19ರಿಂದ ಎರಡು ದಿನ ಎಸ್‌ಸಿಡಿಸಿಸಿ ಬ್ಯಾಂಕ್ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಕಾರ್ಯನಿರ್ವಹಣೆಯ ಬಗ್ಗೆ ಈ ಅಧ್ಯಯನ ತಂಡವು ವಿಶೇಷ ಅಧ್ಯಯನ ನಡೆಸಲಿದೆ. ನಬಾರ್ಡ್ ನಿಯೋಜಿತ ಅಧ್ಯಯನ ತಂಡವು ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಭೇಟಿ ನೀಡುತ್ತಿದ್ದು, ಈ ಅಧ್ಯಯನ ತಂಡವು ಬ್ಯಾಂಕಿನ ಸಮಗ್ರ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ.

ಬ್ಯಾಂಕಿನ ವ್ಯವಹಾರ ಚಟುವಟಿಕೆಗಳ ವೈವಿಧ್ಯೀಕರಣ, ಕ್ರೆಡಿಟ್ ಮಾನಿಟರಿಂಗ್ ಬಗ್ಗೆ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಬಗ್ಗೆ ಹಾಗೂ ಕೃಷಿ ಸಾಲ ಮರುಪಾವತಿಯಲ್ಲಿ ಬ್ಯಾಂಕ್ ಕಳೆದ 25 ವರ್ಷಗಳಿಂದ ಶೇ.100ರ ಸಾಧನೆಯೂ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆಯೂ ಅಧ್ಯಯನ ತಂಡ ಪೂರಕ ಮಾಹಿತಿ ಪಡೆದುಕೊಂಡಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಆಧುನಿಕ ಬ್ಯಾಂಕಿಂಗ್ ಸೇವೆಯ ಜೊತೆಗೆ ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನಮನ್ನಣೆ ಗಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋರ್ ಬ್ಯಾಂಕಿಂಗ್ ನಂತಹ ಉನ್ನತ ಸೇವೆಯು ಬ್ಯಾಂಕಿನ 105 ಶಾಖೆಗಳಲ್ಲಿ ದೊರೆಯುತ್ತಿದೆ. ಬ್ಯಾಂಕ್ ಹೊಂದಿರುವ 105 ಶಾಖೆಗಳ ಪೈಕಿ 23 ಶಾಖೆಗಳು ನಗರ ಪ್ರದೇಶಗಳಲ್ಲಿ ಹಾಗೂ 82 ಶಾಖೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬ್ಯಾಂಕ್ ರೂ.4686.74 ಕೋಟಿ ಠೇವಣಿಯನ್ನು ಹೊಂದಿದ್ದು, ಮುಂದೆ ರೂ.5000 ಕೋಟಿ ಠೇವಣಿಯನ್ನು ಹೊಂದುವ ಗುರಿಯನ್ನು ಹೊಂದಿದೆ. ಬ್ಯಾಂಕ್ ರೂ.4963.07 ಕೋಟಿ ಸಾಲವನ್ನು ನೀಡಿದೆ. ಕ್ರೋಢೀಕೃತ ಸಂಪನ್ಮೂಲಗಳನ್ನು ವಿನಿಯೋಗಿಸುವ ಬಗ್ಗೆ ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ವಿಶೇಷ ನೆಲೆಯಲ್ಲಿ ಗೃಹ ಸಾಲ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ನೇರ ಸಾಲ ನೀಡಿಕೆಯ ಗುರಿಯನ್ನು ರೂ.2000 ಕೋಟಿಗೆ ತಲುಪಿಸುವ ಕಾರ್ಯಯೋಜನೆ ಇದೆ. ಬ್ಯಾಂಕ್ ಪ್ರತೀ ತಾಲೂಕಿನಲ್ಲಿ ಎ.ಟಿ.ಎಂ ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಡಿ.ಸಿ.ಸಿ ಬ್ಯಾಂಕಿನೊಂದಿಗೆ ನೇರ ಸಂಪರ್ಕ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕಿನೊಂದಿಗೆ ನೇರ ಸಂಪರ್ಕ ಹೊಂದುವಂತಹ ಏಕರೂಪದ ತಂತ್ರಾಂಶ ಅಳವಡಿಕೆಯ ಕಾರ್ಯ ಪ್ರಗತಿಯಲ್ಲಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಗೆ ಭದ್ರ ನೆಲೆಯನ್ನು ಒದಗಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ಈ ಯೋಜನೆಯ ಅನುಷ್ಟಾನ, ಸ್ವಸಹಾಯ ಗುಂಪುಗಳ ರಚನೆ ಮತ್ತು ಉಸ್ತುವಾರಿಯಲ್ಲೂ ಗಣನೀಯ ಪ್ರಗತಿಯನ್ನು ಕಂಡಿದೆ. ಉಭಯ ಜಿಲ್ಲೆಯ ಸಹಕಾರಿ ರಂಗದಲ್ಲಿ ಈ ಬ್ಯಾಂಕಿನ ವತಿಯಿಂದ ೩೨,೭೦೦ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. 32,471 ಗುಂಪುಗಳಿಗೆ ಸಾಲ ಸಂಯೋಜನೆ ಮಾಡಲಾಗಿದ್ದು, ಒಟ್ಟು ರೂ.209.42 ಕೋಟಿ ಹೊರಬಾಕಿ ಹೊಂದಿರುತ್ತದೆ. ಈ ಗುಂಪುಗಳ ಒಟ್ಟು ಉಳಿತಾಯ ರೂ.106.57 ಕೋಟಿ ಆಗಿರುತ್ತದೆ.

ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರಾಟದ ಅನುಕೂಲತೆಯನ್ನು ಬ್ಯಾಂಕು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮೂಲಕ ಕಲ್ಪಿಸಿದೆ. ಇಂದು ಈ ಅಧ್ಯಯನ ತಂಡವು ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗಜಾನನ ನವೋದಯ ಸ್ವಸಹಾಯ ಸಂಘ, ಸಿದ್ಧಿ ವಿನಾಯಕ ನವೋದಯ ಸಂಘ, ಶ್ರೀ ವಿಘ್ನೇಶ್ವರ ನವೋದಯ ಸಂಘಗಳಿಗೆ ಭೇಟಿ ನೀಡಿ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳ ಮತ್ತು ಅದರ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿತು. ಸಂಜೆ ಮಂಗಳೂರು ತಾಲೂಕಿನ ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಲಿದೆ.

ನಾಳೆ ಮಾರ್ಚ್ 20ರಂದು ಬಂಟ್ವಾಳ ತಾಲೂಕಿನ ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘ, ಪುತ್ತೂರು ತಾಲೂಕಿನ ಕಾವು ವ್ಯವಸಾಯ ಸೇವಾ ಸಹಕಾರಿ ಸಂಘ, ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆ, ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘ, ಉಡುಪಿ ತಾಲೂಕಿನ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ, ಪಡುಬಿದ್ರೆ ವ್ಯವಸಾಯ ಸೇವಾ ಸಹಕಾರಿ ಸಂಘ, ಕಾಪು ನಾಗಸನ್ನಿಧಿ ಸ್ವಸಹಾಯ ಸಂಘ, ಮಲ್ಲಿಗೆ ನವೋದಯ ಕಲ್ಲುಗುಡ್ಡೆ, ವರೂರು, ಕಾಪು ಸಂಘಕ್ಕೆ ಭೇಟಿ ನೀಡಿ ಅದರ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ ಎಂದು ಡಾ| ಎಂ.ಎನ್ ರಾಜೇಂದ್ರ ಕುಮಾರ್‌ ಅವರು ವಿವರ ನೀಡಿದರು..

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ, ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ. ಮೊದಲಾದವರು ಉಪಸ್ಥಿತರಿದ್ದರು.

Comments are closed.