ಬೆಂಗಳೂರು: ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಉಂಟಾಗಿದ್ದು ಅವರು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

ರಾಜ್ಯ ಕೆ.ಎಸ್.ಆರ್.ಪಿ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ವರ್ತಿಕಾ ಕಟಿಯಾರ್ ತನ್ನ ಪತಿ ನಿತಿನ್ ಶುಭಾಶ್ ಯೋಲಾ ಮತ್ತು ಅವರ ಕುಟುಂಬದ ಏಳು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ.
ಪತಿ ನಿತೀನ್ ಸುಭಾಶ್, ಅವರ ತಾಯಿ, ಸಹೋದರ, ಸೇರಿ ಕುಟುಂಬಸ್ಥರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ತಿಕಾ ಅವರು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆ ನಿತೀನ್ ಸುಭಾಶ್ ಸಹಿತ ಒಟ್ಟು 7 ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ, ಜೀವ ಬೆದರಿಕೆ, ವಂಚನೆ ಆರೋಪಗಳ ಅನ್ವಯ ಎಫ್ಐಆರ್ ದಾಖಲಾಗಿದೆ.
2010 ನೇ ಸಾಲಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಮಹಾರಾಷ್ಟ್ರ ಮೂಲದ 2009 ನೇ ಬ್ಯಾಚ್ ನ ಐಎಫ್ಎಸ್ ( ಫಾರಿನ್ ಸರ್ವೀಸ್ ) ಅಧಿಕಾರಿ ನಿತೀನ್ ಸುಭಾಸ್ ಅವರನ್ನು ಪ್ರೀತಿಸಿ 2011 ರಲ್ಲಿ ಮದುವೆಯಾಗಿದ್ದರು.
ನಿತಿನ್ ಅವರು ಕೊಲಂಬೋ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮದುವೆಯಾದ ಕೆಲವೇ ದಿನಕ್ಕೆ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಇದೀಗ ಪತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ..?
ಮದುವೆ ಸಂದರ್ಭದಲ್ಲಿ ನಿತೀಶ್ ಹಾಗೂ ಕುಟುಂಬಸ್ಥರು ಚಿನ್ನಾಭರಣ ವನ್ನು ಪಡೆದುಕೊಂಡಿದ್ದರು. ಆ ಬಳಿಕವೂ ಹಣಕ್ಕಾಗಿ ಪೀಡಿಸುತ್ತಿದ್ದರು ಹಾಗೂ ಹಣ ನೀಡದಿದ್ದರೆ ವಿವಾಹ ಸಂಬಂಧ ಮುರಿದುಕೊಳ್ಳುವುದಾಗಿ ಬೆದರಿಸುತ್ತಿದ್ದರು. ಅದಕ್ಕೆ ಹೆದರಿ ಹಲವು ಬಾರಿ ಹಣ ನೀಡಿದ್ದೆ. ಇದಲ್ಲದೆ 2012ರಲ್ಲಿ ನನ್ನ ಅಜ್ಜಿಯ ಬಳಿ ನಿತೀಶ್ 5 ಲ.ರೂ. ಮೊತ್ತದ ಚೆಕ್ ಪಡೆದು ಕೊಂಡಿದ್ದರು. ಪತಿ ಅತಿಯಾಗಿ ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದರು. ಅದನ್ನು ಬಿಡುವಂತೆ ತಿಳಿಸಿದರೂ ತಪ್ಪಾಗಿ ತಿಳಿದುಕೊಂಡು ಹಲ್ಲೆ ನಡೆಸುತ್ತಿದ್ದರು. 2016ರಲ್ಲಿ ಕೊಲಂಬೋಗೆ ತೆರಳಿದ್ದಾಗ ನಿತೀಶ್ ಹಲ್ಲೆ ನಡೆಸಿದ ಪರಿಣಾಮ ಕೈ ಮುರಿದಿತ್ತು. 2018ರ ದೀಪಾವಳಿ ಹಬ್ಬಕ್ಕೆ ಉಡುಗೊರೆಗಳನ್ನು ಕಳುಹಿಸಲಿಲ್ಲ ಎಂದು ಪತಿಯ ಕುಟುಂಬಸ್ಥರು ಜಗಳ ಮಾಡಿ ವಿಚ್ಛೇದನ ಕೊಡಿಸುವುದಾಗಿ ಬೆದರಿಸಿದ್ದರು. ಅಲ್ಲದೆ ಪತಿ ಹಾಗೂ ಅವರ ಮನೆಯವರು ಮನೆ ಖರೀದಿಸಲು 35 ಲ.ರೂ. ನೀಡುವಂತೆ ಹಲವು ಬಾರಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.