ಕರ್ನಾಟಕ

ನೋಯ್ಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಹರಿಪ್ರಿಯಾರವರ ಪಾಲಿಗೆ

Pinterest LinkedIn Tumblr

ಬೆಂಗಳೂರು: ಇಂಚರ ಪ್ರೊಡಕ್ಷನ್ಸ್​ನಡಿ ನಿರ್ಮಾಣವಾಗಿರುವ ‘ಅಮೃತಮತಿ’ ಚಿತ್ರವು ಈಗಾಗಲೇ ಆಸ್ಟ್ರಿಯಾ, ನೋಯ್ಡಾ ಮತ್ತು ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದ್ದು,ಈ ಪೈಕಿ ಅತ್ಯುತ್ತಮ ಅಭಿನಯಕ್ಕಾಗಿ ಹರಿಪ್ರಿಯಾ ಅವರಿಗೆ ನೋಯ್ಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿ ‘ಅಮೃತಮತಿ’ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನ ಮಾಡಿ, ಮರುಸೃಷ್ಟಿ ಮಾಡಿದ್ದಾರೆ ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ. ಬರೀ ನಿರ್ದೇಶನವಷ್ಟೇ ಅಲ್ಲ, ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಅವರು ಬರೆದಿದ್ದಾರೆ. ಮಿಕ್ಕಂತೆ ಎರಡು ಜಾನಪದ ಗೀತೆಗಳನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.

ಚಿತ್ರಕ್ಕೆ ಜನಪ್ರಿಯ ಗಾಯಕಿ ಡಾ. ಶಮಿತಾ ಮಲ್ನಾಡ್​ ಸಂಗೀತ ಸಂಯೋಜಿಸಿದರೆ, ನಾಗರಾಜ ಆದವಾನಿ ಛಾಯಾಗ್ರಹಣ ಮಾಡಿದ್ದಾರೆ.

ಪ್ರಪಂಚದ ವಿವಿಧ ದೇಶಗಳ ಚಿತ್ರಗಳ ಜತೆಗೆ ಹೊಸ ಭಾರತೀಯ ಚಿತ್ರಗಳಿಗೆ ಅವಕಾಶ ಕೊಡುವ ಕಾರಣದಿಂದ ಈ ಚಿತ್ರೋತ್ಸವವನ್ನು ‘ಇಂಡಿಯಾ ಇಂಟರ್​ನ್ಯಾಷನಲ್​ ಫೆಸ್ಟಿವಲ್​’ ಎಂಬ ಹೆಸರಿನಿಂದ ನಡೆಸಲಾಗುತ್ತಿರುವುದು ವಿಶೇಷ.

ಈ ಚಿತ್ರದಲ್ಲಿ ಹರಿಪ್ರಿಯಾ ಜತೆಗೆ ಕಿಶೋರ್, ಸುಂದರ್​ರಾಜ್​, ಪ್ರಮೀಳಾ ಜೋಷಾಯ್​, ತಿಲಕ್​, ವತ್ಸಲಾ ಮೋಹನ್​, ಸುಪ್ರಿಯಾ ರಾವ್​, ಅಂಬರೀಶ್​ ಸಾರಂಗಿ ಸೇರಿ ಹಲವರು ನಟಿಸಿದ್ದಾರೆ.

Comments are closed.