ಮಂಗಳೂರು ಆಗಸ್ಟ್ 08 : ಮನುಷ್ಯನಿಗೆ ಸಾವೇ ಇಲ್ಲದಂತೆ ಮಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿರುವ ಈ ಕಾಲದಲ್ಲಿ, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಪ್ರವೃತ್ತಿ, ಸಂಶೋಧನಾ ಕುತೂಹಲಗಳು ನಿರ್ಣಾಯಕ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನಿರ್ದೇಶಕ ಡಾ. ಎಸ್ ಎಮ್ ಶಿವಪ್ರಸಾದ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರಸಾಯನಶಾಸ್ತ್ರ ವಿಭಾಗ ‘ಸುಪ್ರಾಮೋಲಿಕ್ಯುಲರ್ ಪಾಲಿಮರ್ಸ್’ ಕುರಿತು ಏರ್ಪಡಿಸಿದ್ದ ವೆಬಿನಾರ್ನಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಬಯೋಟೆಕ್ನಾಲಜಿ, ನ್ಯಾನೋಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆ ಕುರಿತು ಸಂಶೋಧನೆ ಕೈಗೊಂಡು ಭವಿಷ್ಯದ ಜಗತ್ತಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿ ಜೆಎನ್ಸಿಎಎಸ್ಆರ್ನ ಪ್ರಾಧ್ಯಾಪಕ ಪ್ರೋ. ಸುಬಿ ಜೇಕಬ್ ಜಾರ್ಜ್ ಸುಪ್ರಾಮೋಲಿಕ್ಯುಲರ್ ಪಾಲಿಮರ್ಸ್ ಕ್ಷೇತ್ರದಲ್ಲಿನ ಸಂಶೋಧನೆಗಳಿಂದ ದೊರೆಯುತ್ತಿರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಮಂಗಳೂರು ವಿ.ವಿ. ಕುಲಪತಿ ಪ್ರೋ.. ಸುಬ್ರಹ್ಮಣ್ಯ ಯಡಪಡಿತ್ತಾಯ ಔಷಧೋತ್ಪಾದನೆ, ಕೃಷಿ ಮೊದಲಾದೆಡೆ ಉಪಯೋಗವಾಗುವ ಸುಪ್ರಾಮೋಲಿಕ್ಯುಲರ್ ಪಾಲಿಮರ್ಸ್ ಕುರಿತ ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಕೆ. ರಾಜು ಮೊಗವೀರ, ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕೆ.ಎಂ ಉಷಾ, ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಲಕ್ಷ್ಮಣ ಕೆ, ಸಹ ಪ್ರಾಧ್ಯಾಪಕ ಡಾ. ಸಂಜಯ್ ಅಣ್ಣಾರಾವ್, ಕುಮಾರಿ ಮೇಘನಾ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.

Comments are closed.