ರಾಷ್ಟ್ರೀಯ

ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನಲ್ಲಿ ನಡೆದ ಗುಡ್ಡ ಕುಸಿತ ದುರಂತ; ಸಾವಿನ ಸಂಖ್ಯೆ 23ಕ್ಕೆ ಏರಿಕೆ; ಕೇಂದ್ರ- ರಾಜ್ಯ ಸರ್ಕಾರಗಳಿಂದ ಪರಿಹಾರ ಘೋಷಣೆ

Pinterest LinkedIn Tumblr

ತಿರುವನಂತಪುರಂ: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನಲ್ಲಿ ನಡೆದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಘೋಷಣೆ ಮಾಡಿವೆ.

ಭಾರೀ ಮಳೆಯಿಂದ ಕೆರಳದ ಇಡುಕ್ಕಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 24ಕ್ಕೇರಿದ್ದು, ಮೃತರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಘೋಷಣೆ ಮಾಡಿವೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಹಾರ ಘೋಷಿಸಿದ್ದು, ಈ ಕುರಿತು ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

‘ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ನೋವಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಲಾಗಿದ್ದು, ಸಾವನ್ನಪ್ಪಿದವರ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ.ಘೋಷಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮುನ್ನಾರ್ ನಿಂದ 25 ಕಿ.ಮೀ.ದೂರದಲ್ಲಿರುವ ರಾಜಾಮಲೈ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಸುಮಾರು 80 ಜನ ಈ ಪ್ರದೇಶದಲ್ಲಿ ವಾಸವಿದ್ದರು. ಮಣ್ಣಿನಡಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಕುರಿತು ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಅಂತೆಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ವಿಜಯನ್ ಅವರು, ‘ಅಗ್ನಿಶಾಮಕ ದಳದ 50 ಸದಸ್ಯರ ವಿಶೇಷ ಕಾರ್ಯಪಡೆಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ರಾತ್ರಿ ಕೆಲಸ ಮಾಡಲು ಸಹ ಇವರ ಬಳಿ ಸಲಕರಣೆಗಳಿವೆ. ಇದರೊಂದಿಗೆ ತುರ್ತು ಸೇವೆಗಳ ಸಿಬ್ಬಂದಿಯನ್ನು ಸಹ ಕಳುಹಿಸಲಾಗಿದೆ. ಅಲ್ಲದೆ ಪರಿಹಾರ ಕಾರ್ಯಕ್ಕಾಗಿ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಗಾಯಗೊಂಡವರನ್ನು ಮುನ್ನಾರ್ ನ ಟಾಟಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.