
ರಾಮನಗರ(ಏ. 19): ಬಿಡದಿಯ ಹಿರಿಯ ಕಾಂಗ್ರೆಸ್ ಮುಖಂಡ ಬ್ಯಾಟಪ್ಪ ಇಂದು 1 ಸಾವಿರ ಆಹಾರ ಕಿಟ್ಗಳನ್ನ ಬಡಜನರಿಗೆ ವಿತರಣೆ ಮಾಡಿದರು. ಹಣ್ಣು, ತರಕಾರಿ ಹಾಗೂ ಎಲ್ಲಾ ರೀತಿಯ ದಿನಸಿ ಸಾಮಗ್ರಿಗಳನ್ನ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಬಡಜನರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಮನಗರ ಜಿಲ್ಲೆ ಹಾಗೂ ಆನೇಕಲ್ನಲ್ಲಿ ರೈತರು ಹೂ ಬೆಳೆಯಲ್ಲಿ 500 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ಕೊರೋನಾ ಎಫೆಕ್ಟ್ ನಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಮುಖ್ಯವಾಗಿ ಈಗ ದೇವಸ್ಥಾನಗಳು ಬಂದ್ ಆಗಿವೆ. ಸಮಾರಂಭಗಳು, ಮದುವೆಗಳು ನಡೆಯುತ್ತಿಲ್ಲ. ಬೆಳೆಯನ್ನ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಾಗಿ ನಾವು ಈಗಾಗಲೇ ಸಿಎಂ ಗಮನಕ್ಕೆ ತಂದಿದ್ದೇವೆ. ಹಾಗಾಗಿ ಕೂಡಲೇ ನಷ್ಟಕ್ಕೊಳಗಾಗಿರುವ ರೈತರ ಬಗ್ಗೆ ಗಮನಹರಿಸಬೇಕೆಂದು ಒತ್ತಾಯ ಮಾಡಿದರು.
ಇನ್ನು ಈಗಾಗಲೇ ನಾನು ರಾಮನಗರ ಜಿಲ್ಲೆ ಹಾಗೂ ಹೊರಭಾಗದ 300 ರೈತರ ತೋಟಗಳಿಗೆ ಭೇಟಿ ಕೊಟ್ಟಿದ್ದೇನೆ. 2,500 ಟನ್ಗೂ ಹೆಚ್ಚು ತರಕಾರಿ, ಹಣ್ಣು ಖರೀದಿ ಮಾಡಿ ಜಿಲ್ಲೆಯ ಜನರಿಗೆ ಎಲ್ಲವನ್ನು ಹಂಚುತ್ತಿದ್ದೇವೆ. ಹಾಗೆಯೇ ಪಕ್ಷದ ಮುಖಂಡರಿಗೂ ಖರೀದಿ ಮಾಡಲು ಮನವಿ ಮಾಡಿದ್ದೇನೆಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಗಡಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments are closed.