ಮಂಗಳೂರು / ಬೆಂಗಳೂರು, ಫೆಬ್ರವರಿ, 18: ಕಂಬಳ ಕ್ರೀಡೆಯಲ್ಲಿ ತನ್ನ ಕಾಲ್ಚಳಕದ ಮೂಲಕ ಸದ್ದು ಮಾಡಿದ ಮಂಗಳೂರು ತಾಲ್ಲೂಕು ಅಶ್ವತ್ಥ ಪುರದ ಶ್ರೀನಿವಾಸ ಗೌಡ ಅವರನ್ನು ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನಿಸಿದರು.
ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಹ್ವಾನದ ಮೇರೆಗೆ ಅವರು ಸೋಮವಾರ ಬೆಳಗ್ಗೆ ವಾರ್ತಾ ಇಲಾಖೆಯ ಸಿಬ್ಬಂದಿ ಅರುಣ್ ಕಾಂತ್ ಹಾಗೂ ತಂಡದೊಂದಿಗೆ ಬೆಂಗಳೂರಿಗೆ ತೆರಳಿದರು. ಈ ಸಂದರ್ಭ ಮುಖ್ಯಮಂತ್ರಿಗಳು ರೂ. 3ಲಕ್ಷ ಮೊತ್ತವನ್ನು ನೀಡಿ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ತಮ್ಮ ಕಚೇರಿಯಲ್ಲಿ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು, ಶ್ರೀನಿವಾಸ ಅವರಿಗೆ ರೂ. 1 ಲಕ್ಷ ನೆರವು ನೀಡುವುದಾಗಿ ಪ್ರಕಟಿಸಿದರು.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟ್ ಮಾಡಿ, ಶ್ರೀನಿವಾಸ ಗೌಡ ಅವರಿಗೆ ಸಾಯ್ ನಲ್ಲಿ ತರಬೇತಿಗಾಗಿ ಅಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ತೆರಳಿದ್ದರು.



Comments are closed.