
ಚಿಕ್ಕಮಗಳೂರು: ಸಮ್ಮೇಳನಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಉಂಟಾದ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ವಿರೋಧದ ನಡುವೆಯೂ ಶುಕ್ರವಾರ ಚಾಲನೆ ದೊರೆತಿದೆ.
ಶೃಂಗೇರಿಯಲ್ಲಿ ಎರಡು ದಿನಗಳ ಸಮ್ಮೇಳನಕ್ಕೆ ರಾಷ್ಟ್ರ ಧ್ವಜಾರೋಹಣದ ನೆರವೇರಿಸುವ ಮೂಲಕ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಪುಟ್ಟಯ್ಯ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಕಸಾಪ ಧ್ವಜಾರೋಹಣಗೈದರು.
ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಸಲು ಒಪ್ಪದ ಕೆಲ ಬಲಪಂಥೀಯ ಸಂಘಟನೆಗಳು ಸಮ್ಮೇಳನ ನಡೆದಲ್ಲಿ ಶೃಂಗೇರಿ ಬಂದ್ ಮಾಡುವ, ವೇದಿಕೆಗೆ ನುಗ್ಗುವ ಬೆದರಿಕೆಗಳನ್ನೂ ಹಾಕಿವೆ. ಈ ಬೆದರಿಕೆಗಳ ಕಾರಣಕ್ಕೆ ನಾಡಿನ ಪ್ರಮುಖ ಸಾಹಿತಿಗಳು, ಪ್ರಗತಿಪರರು ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಪಣ ತೊಟ್ಟಿದ್ದಾರೆ. ಈಗಾಗಲೇ ನಾಡಿನ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು, ಸಾಹಿತ್ಯಾಸಕ್ತರು ಜಿಲ್ಲೆಗೆ ಆಗಮಿಸಿದ್ದಾರೆ.
ಸಮ್ಮೇಳನಕ್ಕೆ ವಿರೋಧಿಸಿ ಶೃಂಗೇರಿ ಪಟ್ಟಣ ಸಂಪೂರ್ಣ ಬಂದ್ ಕರೆನೀಡಲಾಗಿದ್ದು, ಜನರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಅನುಮತಿ ಇಲ್ಲದೇ ಸಮ್ಮೇಳನ ನಡೆತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಬಂದೋಬಸ್ತ್ ನಡೆಸಿದ್ದಾರೆ.
ಒಂದು ಕಡೆ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರು ಚಾಲನೆ ನೀಡಿ, ನುಡಿ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಇತ್ತ ಸಮ್ಮೇಳನ ವಿರೋಧಿಸಿ ಪ್ರತಿಭಟನೆಗೆ ವಿರೋಧಿ ಬಣ ಸಜ್ಜಾಗಿದೆ. ವಿರೋಧದ ನಡುವೆ ಸಮ್ಮೇಳನಕ್ಕೆ ಚಾಲನೆ ನೀಡಿದ ಹಿನ್ನೆಲೆ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ, ಕನ್ನಡಹಬ್ಬ ಸಂಭ್ರಮದಿಂದ ನಡೆಯುತ್ತಿದೆ. ಸಚಿವರ ಕುಮ್ಮಕ್ಕಿನಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಮ್ಮೇಳನಕ್ಕೆ ಅಸಹಕಾರ ತೋರುತ್ತಿದ್ದಾರೆ. ಇದು ಸಚಿವರ ಸರ್ವಾಧಿಕಾರದ ಧೋರಣೆ. ನಾನು ಸಮ್ಮೇಳನಾಧ್ಯಕ್ಷ ಆಕಾಂಕ್ಷಿಯಾಗಿರಲಿಲ್ಲ. ಕಸಾಪ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ನನ್ನ ಜಾತಿ ನೋಡಿ ನನ್ನನ್ನು ವಿರೋಧಿಸುತ್ತಿದ್ದಾರೆ. ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಕ್ತ ವ್ಯಕ್ತಿ ಅಲ್ಲ. ಈ ಹಿಂದೆ ಸಿ.ಟಿ.ರವಿ ಈ ಹಿಂದೆ ಕನ್ನಡ ಬಾವುಟ ಬೇಡ ಎಂದಿದ್ದರು. ಅವರಿಗೆ ಕನ್ನಡ ಬಗ್ಗೆ ಅಭಿಮಾನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನ ಸಂಭ್ರಮದಿಂದ ನಡೆಯಲಿದೆ. ಸಮ್ಮೇಳನಕ್ಕೆ ಜನರು ಹೆಚ್ಚಿನ ಅನುದಾನ ನೀಡಿದ್ದಾರೆ. ಸರ್ಕಾರದ ಅನುದಾನಕ್ಕಿಂತ ಹೆಚ್ಚು ಸಾಹಿತ್ಯಾಸಕ್ತರು ನೀಡಿದ್ದಾರೆ. ಎರಡು ದಿನವೂ ಅರ್ಥಪೂರ್ಣವಾಗಿ ಸಮ್ಮೇಳನ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Comments are closed.