
ಬಳ್ಳಾರಿ: ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಎಡಪಂಥಿಯ ಮುಖಂಡರು ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಗಾಂಧಿ ಭವನದಿಂದ ರಾಯಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಲೇ ಮಧ್ಯ ಪ್ರವೇಶಿಸಿದ ಪೊಲೀಸರು 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಎರಡು ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಈ ವೇಳೆ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಮುಖಂಡ ಜೆ.ಸತ್ಯಬಾಬು ಮಾತನಾಡಿ, ಧರ್ಮದ ಆಧಾರದ ಮೇಲೆ ಪೌರತ್ವ ತಿದ್ದುಪಡಿಯಾಗಿರುವುದು ಖೇದಕರ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿರುವುದು ಸರಿಯಲ್ಲ. ಭಾರತೀಯ ಗಣತಂತ್ರದ ಪ್ರಜಾಸತ್ತಾತ್ಮಕ ಬುನಾದಿಯನ್ನು ನಾಶಪಡಿಸುವುದೇ ಪೌರತ್ವ ಕಾಯ್ದೆಯ ಹಿಂದಿನ ಉದ್ದೇಶವಾಗಿದೆ.ಸಂವಿಧಾನ ವಿರೋಧಿಯಾದ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್, ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಬಸವರಾಜ್, ನಗರ ಕಾರ್ಯದರ್ಶಿ ಚಂದ್ರಕುಮಾರಿ, ಮುಖಂಡರಾದ ಕೆ.ನಾಗಭೂಷಣರಾವ್, ಶೇಖರ್ಬಾಬು ಇತರರು ಪಾಲ್ಗೊಂಡಿದ್ದರು.
Comments are closed.