ರಾಷ್ಟ್ರೀಯ

9 ಯುವತಿಯರ ಮೇಲೆ ಅತ್ಯಾಚಾರ ಎಸಗಿ, ಸುಟ್ಟು ಹಾಕಿದ್ದ ಪಶುವೈದ್ಯೆ ಅತ್ಯಾಚಾರಿಗಳು!

Pinterest LinkedIn Tumblr


ಹೈದರಾಬಾದ್‌: ಅತ್ಯಾಚಾರಿಗಳ ವಿರುದ್ಧ ದೇಶಾದ್ಯಂತ ಆಕ್ರೋಶದ ಕಿಚ್ಚು ಹೊತ್ತಿಸಿದ್ದ ಹೈದರಾಬಾದ್‌ ಪಶುವೈದ್ಯೆ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳು ವಿಚಾರಣೆ ವೇಳೆ ಇದೇ ರೀತಿ ಇನ್ನೂ 9 ಯುವತಿಯರ ಮೇಲೆ ಅತ್ಯಾಚಾರ ಎಸಗಿ, ಸುಟ್ಟು ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ತೆಲಂಗಾಣ-ಕರ್ನಾಟಕ ಗಡಿಯಲ್ಲಿಇಂತಹ ಕೃತ್ಯಗಳು ನಡೆದಿದ್ದರ ಜಾಡು ಹಿಡಿದು ತನಿಖೆ ನಡೆಸಲು ಸೈಬರಾಬಾದ್‌ ಪೊಲೀಸರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದು, ಇದರೊಂದಿಗೆ ಇನ್ನಷ್ಟು ಪ್ರಕರಣಗಳ ತನಿಖೆ ಚುರುಕುಗೊಳ್ಳಲಿದೆ. ನಾಲ್ವರು ಆರೋಪಿಗಳಾದ ಮೊಹಮ್ಮದ್‌ ಆರೀಫ್‌, ಜೊಲ್ಲು ನವೀನ, ಜೊಲ್ಲು ಶಿವ ಮತ್ತು ಚೆನ್ನಕೇಶವುಲು ನವೆಂಬರ್‌ 27ರಂದು ಹೈದರಾಬಾದ್‌ ಹೊರವಲಯದಲ್ಲಿ ದಿಶಾ ಮೇಲೆ ಅತ್ಯಾಚಾರ ಎಸಗಿ ಹೈದರಾಬಾದ್‌-ಬೆಂಗಳೂರು ಹೆದ್ದಾರಿಯ ಸೇತುವೆಯೊಂದರ ಅಡಿ ಸುಟ್ಟು ಹಾಕಿದ್ದರು.

ಡಿಸೆಂಬರ್‌ 6ರಂದು ದಿಶಾ ಪ್ರಕರಣ ಸಂಬಂಧ ಪೊಲೀಸ್‌ ಎನ್‌ಕೌಂಟರ್‌ಗೆ ಈ ನಾಲ್ವರೂ ಆರೋಪಿಗಳು ಬಲಿಯಾಗಿದ್ದರು. ಈ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ತೆಲಂಗಾಣ-ಕರ್ನಾಟಕ ಗಡಿಯಲ್ಲಿಇದೇ ರೀತಿಯ 15 ಪ್ರಕರಣಗಳಲ್ಲಿ ಈ ಪಾತಕಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸಿದ್ದರು.

”ವಿಚಾರಣೆ ವೇಳೆ ಆರೀಫ್‌ ಮತ್ತು ಚೆನ್ನಕೇಶವುಲು ತೃತೀಯ ಲಿಂಗಿಗಳೂ ಸೇರಿದಂತೆ ಹೆದ್ದಾರಿಗಳಲ್ಲಿ ಸಾಕಷ್ಟು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದೆವು. ಅದರಲ್ಲೂ 9 ಯುವತಿಯರ ಮೇಲೆ ಅತ್ಯಾಚಾರ ಎಸಗಿ ನಂತರ ಸುಟ್ಟುಹಾಕಿದ್ದೆವು ಎಂಬ ಸಂಗತಿಯನ್ನು ಬಾಯಿಬಿಟ್ಟಿದ್ದರು. ಇವರು ಕರ್ನಾಟಕ ಗಡಿಭಾಗದ ತೆಲಂಗಾಣದ ಸಂಗಾರೆಡ್ಡಿ, ರಂಗಾರೆಡ್ಡಿ, ಮೆಹಬೂಬ್‌ ನಗರಗಳಲ್ಲಿ ಕೃತ್ಯಗಳನ್ನು ಎಸಗಿದ್ದನ್ನು ಒಪ್ಪಿಕೊಂಡಿದ್ದರಿಂದ ಈ ಭಾಗದಲ್ಲಿ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ,” ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Comments are closed.