ಕರ್ನಾಟಕ

ಇಂದು ಅಥವಾ ನಾಳೆಯೊಳಗೆ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡಲಿದೆ; ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು(ಸೆ.28): ಕರ್ನಾಟಕ ನೆರೆ ಸಂತ್ರಸ್ತರಿಗೆ ಇಂದು ಅಥವಾ ನಾಳೆಯೊಳಗೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು, ಈಗಷ್ಟೇ ನನ್ನ ಬಳಿ ಚರ್ಚಿಸಿದ್ದಾರೆ. ನಾಳೆಯೊಳಗೆ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಬಿ.ಎಸ್​ ಯಡಿಯೂರಪ್ಪನವರು, ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿದ ಕೂಡಲೇ ಕೆಲಸ ಶುರು ಮಾಡುತ್ತೇವೆ. ಒಂದೇ ಹಂತದಲ್ಲಿ ರಾಜ್ಯದ ನಾಲ್ಕೈದು ಜಿಲ್ಲೆಗಳಿಗೆ ಕೇಂದ್ರ ಪರಿಹಾರ ನೀಡಲಿದೆ. ಹಾಗಾಗಿ ನೆರೆ ಸಂತ್ರಸ್ತರು ಆಂತಕಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದರು.

ಇತ್ತೀಚೆಗೆ ನೆರೆಹಾನಿ ಕುರಿತಾದ ಪರಿಷ್ಕೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿತ್ತು. ಮತ್ತೊಮ್ಮೆ ಅಂಕಿ, ಅಂಶಗಳ ಸಮೇತ ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು, ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು.

ಪ್ರವಾಹದಿಂದ ರಾಜ್ಯದಲ್ಲಿ ಸುಮಾರು 38 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಜನರ ಆಸ್ತಿ-ಪಾಸ್ತಿ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಇದರಿಂದಾಗಿ ರಾಜ್ಯಕ್ಕೆ ದೊಡ್ಡ ಅನಾಹುತ ಸಂಭವಿಸಿದೆ. ಪ್ರವಾಹದಿಂದ 100ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. 2 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. 103 ತಾಲೂಕು ಪ್ರವಾಹಕ್ಕೆ ತುತ್ತಾಗಿದೆ. 7.82 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಪ್ರಸ್ತಾಪಿಸಿತ್ತು. ಅಲ್ಲದೇ 38,000 ಕೋಟಿ ನೆರೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿಯೂ ಮಾಡಲಾಗಿತ್ತು.

38 ಸಾವಿರ ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರವೂ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಂದು ವರದಿ ನೀಡಿದೆ. ಪರಿಷ್ಕೃತ ನೆರೆ ಹಾನಿ ವರದಿ ಸಲ್ಲಿಕೆ ಮೂಲಕ ಮತ್ತೊಮ್ಮೆ ಕೇಂದ್ರಕ್ಕೆ ರಾಜ್ಯ ಮನವಿ ಮಾಡಿದೆ. ಈ ಬಾರಿ 35 ಸಾವಿರ ಕೋಟಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿಂದೆಗಿಂತಲೂ 3,291 ಕೋಟಿ ರೂ. ಕಡಿಮೆಗೊಳಿಸಿ ಪರಿಹಾರ ಕೇಳಲಾಗಿದೆ. ಕೇಂದ್ರ ಗೃಹ ಇಲಾಖೆಗೆ ಕಂದಾಯ ಅಧಿಕಾರಿಗಳೇ ಖುದ್ದು ಪರಿಷ್ಕೃತ ವರದಿ ಸಲ್ಲಿಸಿದ್ದಾರೆ.

ಭೀಕರ ಪ್ರವಾಹಕ್ಕೆ ರಾಜ್ಯದಲ್ಲಿ 2.37 ಲಕ್ಷ ಮನೆಗಳು ನಾಶ ಆಗಿದೆ. ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. 4ಲಕ್ಷ ಜನರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಆರಂಭದಲ್ಲಿ ಸುಮಾರು 600 ಕೋಟಿ ಹಣ ಬಿಡುಗಡೆ ಮಾಡಿತ್ತು. ಸಂತ್ರಸ್ಥರಿಗೆ ಹಣ ತಲುಪಿಸುವ ಕೆಲಸ ಸರ್ಕಾರವೇ ಮಾಡಿತ್ತು. ಸಂತ್ರಸ್ತರ ಹಣ ಮಧ್ಯವರ್ತಿಗಳ ಪಾಲಾಗದಂತೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗಿತ್ತು.

ಇಷ್ಟಾದರೂ, ಕೇಂದ್ರದಿಂದ ಯಾವುದೇ ಪರಿಹಾರ ನಿಧಿ ರಾಜ್ಯಕ್ಕೆ ಘೋಷಣೆಯಾಗಿಲ್ಲ. ಈ ವಿಚಾರದಲ್ಲಿ ಮೋದಿ ಸರ್ಕಾರದ ಕ್ರಮವನ್ನು ಖಂಡಿಸಿರುವ ವಿರೋಧ ಪಕ್ಷಗಳ ನಾಯಕರು, ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿದ್ದಾರೆ. ರಾಜ್ಯದಿಂದ 25 ಜನ ಬಿಜೆಪಿ ಸಂಸದರನ್ನೂ ಆಯ್ಕೆ ಮಾಡಿ ಕಳಿಸಿದ್ದೇವೆ. ಆದರೆ, ಮೋದಿ ಎದುರು ನೆರೆ ಪರಿಹಾರ ಕೇಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ.

Comments are closed.