
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನನಗೆ ಮಾರ್ಗದರ್ಶಕರು. ಅವರೊಂದಿಗೆ ಯಾವುದೇ ಮುನಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಿಂದೆ ರಾಜ್ಯಾಧ್ಯಕ್ಷ ಅವಕಾಶ ಕೊಟ್ಟಿರಲಿಲ್ಲ. ಕೊಟ್ಟ ಮೇಲೆ ಯತ್ನಾಳ್ ಅವರು ಉತ್ತರ ಕರ್ನಾಟಕ ಪ್ರವಾಸ ಮಾಡಿ ಎಂದು ಮಾರ್ಗದರ್ಶನ ಮಾಡಿದ್ದಾರೆ. ಅವರು ಹೇಳಿದಂತೆ ಅವರ ಸಮರ್ಥ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಿದ್ದೇನೆ ಎಂದು ನಳಿನ್ ತಿಳಿಸಿದರು.
ಐಎಎಸ್ ಅಧಿಕಾರಿಗಳು ಬಿಜೆಪಿ ಸರ್ಕಾರವಿದ್ದಾಗ ರಾಜೀನಾಮೆ ನೀಡಿಲ್ಲ ಎಂದು ಹೇಳಿದ ಅವರು, “ಕೇವಲ ಒಬ್ಬರು ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ಸಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ,” ಎಂದರು.
“ಹಿಂದಿನ ಸಿದ್ದರಾಮಯ್ಯ ಸರ್ಕಾರವಿದ್ದಾಗ ಡಿವೈಎಸ್ಪಿಯಿಂದ ಎಸ್ಪಿವರೆಗೆ ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಎಚ್‌ಡಿ ಕುಮಾರಸ್ವಾಮಿ ಸರ್ಕಾರವಿದ್ದಾಗ ದಕ್ಷ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಅಧಿಕಾರಿಗಳಿಗೆ ತಮ್ಮ ರಾಜೀನಾಮೆಯ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಇದೆ,” ಎಂದು ನಳಿನ್ ಅಭಿಪ್ರಾಯಪಟ್ಟರು.
ಸಿಎಂ ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಇದೇ ವೇಳೆ ನಳಿನ್ ಸ್ಪಷ್ಟಪಡಿಸಿದರು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಮತ್ತು ತಮ್ಮ ಮಧ್ಯೆ ಯಾವುದೇ ಭಿನ್ನಮತ ವ್ಯಕ್ತವಾಗಿಲ್ಲ. ಯಡಿಯೂರಪ್ಪ ನನಗೆ ಮಾರ್ಗದರ್ಶಕರು. ಸಭೆಯಲ್ಲಿ ಪಕ್ಷ ಸಂಘಟಿಸುವ ಕುರಿತು ಉತ್ತಮ ಚರ್ಚೆಯಾಗಿದೆ ಎಂದರು.
ನಮ್ಮ ಕಡೆ ಕಾಫಿ ಪ್ಲ್ಯಾಂಟರ್ ಥರ ನ್ಯೂಸ್ ಪ್ಲ್ಯಾಂಟರ್ ಈ ಭಿನ್ನಾಭಿಪ್ರಾಯದ ಸುದ್ದಿಯನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಕ್ಟೋಬರ್, ನವೆಂಬರ್ ವೇಳೆಗೆ ಪೂರ್ಣವಾಗಲಿದೆ ಎಂದರು.
Comments are closed.