ಕರಾವಳಿ

ಭವಾನಿ ಫೌಂಡೇಶನ್ ಟ್ರಸ್ಟ್‌ಗೆ `ಅತ್ಯುತ್ತಮ ಸೇವಾ ಪ್ರಶಸ್ತಿ’

Pinterest LinkedIn Tumblr

ಮಂಗಳೂರು : ನಗರದ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್‌ಗೆ 2019ನೇ ಸಾಲಿನ `ಅತ್ಯುತ್ತಮ ಸೇವಾ ಪ್ರಶಸ್ತಿ’ ಲಭಿಸಿದೆ. ಶಿಕ್ಷಣ, ಆರೋಗ್ಯ, ವಿವಾಹ, ರಕ್ತ ಸಂಗ್ರಹ, ಆದಿವಾಸಿಗಳ ಕಲ್ಯಾಣ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಮೊದಲಾದ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಮಾಜಮುಖಿ ಕಾರ್ಯದಲ್ಲಿ ಮಾನವೀಯ ಅನುಕಂಪದಿಂದ ಸ್ಪಂದಿಸುತ್ತಿರುವ `ಭವಾನಿ ಫೌಂಡೇಶನ್’ಗೆ ದಕ್ಷಿಣ ಗೋವಾದ ಹೋಲಿಡೇ ಇನ್ ಹೊಟೇಲ್‌ನಲ್ಲಿ ನಡೆದ ಐಬೀಚ್ ಫಿಲ್ಮ್ ಫೆಸ್ಟಿವಲ್‌ನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಭವಾನಿ ಫೌಂಡೇಶನ್ ಟ್ರಸ್ಟ್ ಇದರ ಅಧ್ಯಕ್ಷ ಕುಸುಮೋದರ ಡಿ. ಶೆಟ್ಟಿ (ಕೆ.ಡಿ.ಶೆಟ್ಟಿ) ಅವರಿಗೆ ಗೋವಾದ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್, ಕೇಂದ್ರ ಆಯುಷ್ ಹಾಗೂ ಉಪ ರಕ್ಷಣ ಸಚಿವ ಶ್ರೀಪಾದ್ ನಾಯ್ಕ್, ಉಡುಪಿ ಶಾಸಕ ರಘುಪತಿ ಭಟ್ ಅವರು ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಿ ಶುಭಹಾರೈಸಿದರು.

ಅಖಿಲ ಭಾರತ ನೇತ್ರ ಚಿಕಿತ್ಸಾ ಸೊಸೈಟಿ, ಕರ್ನಾಟಕ ನೇತ್ರ ಚಿಕಿತ್ಸಾ ಸೊಸೈಟಿ ಹಾಗೂ ಪ್ರಸಾದ್ ನೇತ್ರಾಲಯದ ಜಂಟಿ ಆಯೋಜನೆ ಯಲ್ಲಿ ಜರಗಿದ ಈ ಸಮಾರಂಭದಲ್ಲಿ ನೇತ್ರದಾನ ಕಾರ್ಯಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿರುವ ಭವಾನಿ ಫೌಂಡೇಶನ್ ಟ್ರಸ್ಟ್ ಸಂಸ್ಥೆಯನ್ನು ಅಭಿನಂದಿಸಲಾಯಿತು.

ಅಖಿಲ ಭಾರತ ನೇತ್ರ ಚಿಕಿತ್ಸಾ ವೈಜ್ಞಾನಿಕ ಸಮಿತಿಯ ಡಾ| ಕೃಷ್ಣ ಪ್ರಸಾದ್ ಕುಡ್ಲು, ಡಾ| ಚಿನ್ನಪ್ಪ ಎ.ಜಿ, ಮುಂಬಯಿ ಸಕಾಲ್ ಪತ್ರಿಕೆಯ ಮಹಾ ಪ್ರಬಂಧಕ ಹಾಗೂ ಭವಾನಿ ಫೌಂಡೇಶನ್‌ನ ವಿಶ್ವಸ್ತ ದಿನೇಶ್ ಶೆಟ್ಟಿ, ಇನ್‌ಸ್ಪೆಕ್ಟರ್ ಗೋಪಾಲ್ ಕುಂದರ್, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಭವಾನಿ ಫೌಂಡೇಶನ್ ಟ್ರಸ್ಟ್
ಸಮಾಜ ಸೇವಕ, ಉದ್ಯಮಿ ಕೆ.ಡಿ ಶೆಟ್ಟಿ ಅವರು ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ಭವಾನಿ ಫೌಂಡೇಶನ್ ಟ್ರಸ್ಟ್ ಪ್ರಸ್ತುತ ಮಹಾರಾಷ್ಟ್ರ ಸೇರಿದಂತೆ ಊರಿನಲ್ಲೂ ಸಮಾಜಪರ ಕಾರ್ಯಗಳೊಂದಿಗೆ ಚಿರ ಪರಿಚಿತವಾಗಿದೆ.

ಸಂಸ್ಥೆಯು ಜಾತಿ, ಮತ, ಧರ್ಮವನ್ನು ಮರೆತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ಸಹಾಯ, ಬಡ ಹೆಣ್ಮಕ್ಕಳ ಮದುವೆಗೆ ನೆರವು, ಬಡವರಿಗೆ ಮನೆ ನಿರ್ಮಾಣ, ಆದಿವಾಸಿ ಶಾಲೆಗಳ ಜೀರ್ಣೋದ್ಧಾರ ಇನ್ನಿತರ ಸಮಾಜಪರ ಕಾರ್ಯಕ್ರಮಗಳನ್ನು ಸದ್ದಿಲ್ಲದೆ ಮಾಡುತ್ತಿದೆ. ಕೆ.ಡಿ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆಯು ನೊಂದವರ ಪಾಲಿಗೆ ಅಪತ್ಬಾಂಧವ ರೀತಿಯಲ್ಲಿ, ದೀನದಲಿತರ ಕಣ್ಣೀರೊರೆಸುವ ಕಾರ್ಯದಲ್ಲೂ ತೊಡಗಿದೆ.

ಪ್ರತೀ ವರ್ಷ ಲಕ್ಷಾಂತರ ರೂಗಳನ್ನು ಶಿಕ್ಷಣ, ಆರೋಗ್ಯ ಇನ್ನಿತರ ಸಮಾಜಪರ ಕಾರ್ಯಗಳಿಗೆ ವ್ಯಯಿಸುತ್ತಿದೆ. ಊರಿನ ಹೆಚ್ಚಿನ ದೈವ-ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ದೈವ-ದೇವರ ಬಗ್ಗೆ ಅಪಾರ ನಂಬಿಕೆಯನ್ನು ಹೊಂದಿರುವ ಕೆ.ಡಿ ಶೆಟ್ಟಿ ಅವರ ಪಾಲು ಮಹತ್ತರವಾಗಿದೆ. ಫೌಂಡೇಶನ್‌ನ ಸಾಧನೆಗಳಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿರುವ ಕೆ.ಡಿ ಶೆಟ್ಟಿ ಅವರು ತಮ್ಮ `ಭವಾನಿ ಸಮೂಹ’ ಸಂಸ್ಥೆಯಲ್ಲಿ ತುಳು-ಕನ್ನಡಿಗರು ಸೇರಿದಂತೆ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ. ದೇಶದ ಪ್ರಮುಖ ಕಂಪೆನಿಗಳಲ್ಲಿ `ಭವಾನಿ’ ಸಮೂಹ ಸಂಸ್ಥೆಯು ಗುರುತಿಸಿಕೊಂಡಿದ್ದು, ಕಳೆದ ಮೂರು-ನಾಲ್ಕು ವರ್ಷಗಳಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.

Comments are closed.