
ಬೆಂಗಳೂರು: 14 ತಿಂಗಳ ಸಮ್ಮಿಶ್ರ ಸರ್ಕಾರವನ್ನು ಏಳನೇ ಪ್ರಯತ್ನದಲ್ಲಿ ಬೀಳಿಸಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾದರು. ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗ ಬೇಕು ಎಂಬ ಅವರ ಕನಸು ಈಡೇರಿತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರು ಕೇವಲ ನಾಮಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರದ ಸಂಪೂರ್ಣ ಹತೋಟಿಯನ್ನು ಹೈ ಕಮಾಂಡ್ ಹಾಗೂ ಬಿಎಲ್ ಸಂತೋಷ್ ಬಣ ಹೊಂದಿದೆ. ಈ ಕುರಿತು ಲೇವಡಿ ಮಾಡಿರುವ ಸಿದ್ದರಾಮಯ್ಯ ಬಿಎಸ್ವೈ ಅನುಭವಿಸುತ್ತಿರುವ ಅವಮಾನ, ಅನ್ಯಾಯದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸರಿಯಾಗಿ ಒಂದು ತಿಂಗಳ ಬಳಿಕ ಈಗ ಖಾತೆ ಹಂಚಿಕೆಯಾಗಿದೆ. ಆತುರದಲ್ಲಿ ಸರ್ಕಾರ ರಚನೆ ಮಾಡಿದ ಬಿಜೆಪಿ, ಖಾತೆ ಹಂಚಿಕೆ, ಸಚಿವರ ನೇಮಕದಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಯಿತು. ಕಾರಣ ಬಿಎಸ್ವೈ ಸರ್ಕಾರದ ಮೇಲೆ ಹೈ ಕಮಾಂಡ್ ಹೊಂದಿದ್ದ ಹಿಡಿತ.
ಸರ್ಕಾರದಲ್ಲಿ ಬಿಎಸ್ವೈ ಮಾತಿಗಿಂತ ಆರ್ಎಸ್ಎಸ್ ನಾಯಕರ ಮಾತು ಹೆಚ್ಚಿನ ಮಾನ್ಯತೆ ಹೊಂದಿದೆ. ಇದೇ ಕಾರಣಕ್ಕೆ ಸವದಿ, ಕಾರಜೋಳರಿಗೆ ಅಶ್ವತ್ಧ ನಾರಾಯಣರಿಗೆ ಸಿಕ್ಕ ಲಾಭಾದಾಯಕ ಹುದ್ದೆಗಳು. ಬಿಎಸ್ ಯಡಿಯೂರಪ್ಪ ಸೂಚಿಸಿದ ನಾಯಕರಿಗೆ ಹೈ ಕಮಾಂಡ್ ಯಾವುದೇ ಪ್ರಮುಖ ಖಾತೆಯನ್ನು ನೀಡಿಲ್ಲ. ಅಲ್ಲದೇ ಸವದಿಯನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಭಿನ್ನಮತ ಹೆಚ್ಚಾಗುತ್ತದೆ ಎಂಬ ಬಿಎಸ್ವೈ ಮಾತಿಗೂ ಮನ್ನಣೆ ಸಿಕ್ಕಿಲ್ಲ.
ಇದರ ಜೊತೆಗೆ ಬಿಜೆಪಿ ಅಧ್ಯಕ್ಷರಾಗಿ ಕಟ್ಟಾರ್ ಹಿಂದೂತ್ವವಾದಿಯಾದ ನಳಿನ್ ಕುಮಾರ್ ಕುಮಾರ್ ನೇಮಕ ಮಾಡಲಾಗಿದೆ. ಇದರಿಂದಾಗಿ ಪಕ್ಷ ಹಾಗೂ ಸರ್ಕಾರದ ನಡುವೆ ಹೇಗೆ ಸಮನ್ವಯತೆ ಮೂಡಲಿದೆ. ಸರ್ಕಾರವನ್ನು ನಿಯಂತ್ರಣದಲ್ಲಿಡಲೇ ಅವರಿಗೆ ಈ ಹುದ್ದೆ ನೀಡಲಾಗಿದೆ. ಜೊತೆಗೆ ಯಡಿಯೂರಪ್ಪ ಅಧಿಕಾರದ ಮೇಲೆ ಹಿಡಿತ ಸಾಧಿಸಲು ಮೂವರು ಡಿಸಿಎಂಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿಗಳ ಧ್ವನಿಯನ್ನು ಉಡುಗಿಸುವ ಕೆಲಸವನ್ನು ಮಾಡಲಾಗಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸದ್ಯ ಬಿಜೆಪಿ ಸರ್ಕಾರದಲ್ಲಿ ಮೂಡಿರುವ ಭಿನ್ನಮತ ಸರಿದೂಗಿಸುವುದು ಸುಲಭವಲ್ಲ. ಕಾರಣ. ಇದರ ನಿಯಂತ್ರಣವಿರುದು ಹೈ ಕಮಾಂಡ್ನಲ್ಲಿ. ಸಚಿವರ ನೇಮಕಕ್ಕೆ 26 ದಿನ, ಖಾತೆ ಹಂಚಿಕೆಗೆ 6 ದಿನ ಸಮಯ ತೆಗೆದುಕೊಂಡ ಸರ್ಕಾರ ಈಗ ಅಸಮಾಧಾನಿತ ಸಚಿವರ ಓಲೈಕೆಗೆ ಎಷ್ಟುದಿನ ತೆಗೆದುಕೊಳ್ಳಲಿದೆ. ಈ ರೀತಿ ಭಿನ್ನಮತದಿಂದ ರಾಜ್ಯದ ಆಡಳಿತ ಹೇಗೆ ನಡೆಯಲಿದೆ. ಇಂತಹ ಸರ್ಕಾರ ಇರುವುದಕ್ಕಿಂತ ಚುನಾವಣೆಗೆ ಹೋಗುವುದು ಒಳ್ಳೆಯದು. ಆಗ ಜನರು ತಮಗೆ ಬೇಕಾದವರ ಆಯ್ಕೆ ಮಾಡುವರು ಎಂದಿದ್ದರು.
Comments are closed.