
ದೇಶವು ಮತ್ತೊಬ್ಬ ಹಿರಿಯ ಸಾಹಿತಿಯನ್ನು ಕಳೆದುಕೊಂಡಿದೆ. ಲ್ಯಾವೆಲ್ಲೆ ರಸ್ತೆಯ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಗಿರೀಶ್ ಕಾರ್ನಾಡ್ ಕೊನೆಯುಸಿರೆಳೆದಿದ್ದಾರೆ. ಗಿರೀಶ್ ಕಾರ್ನಾಡ್ ಕುಟುಂಬ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಅವರ ಅಂತಿಮ ದರ್ಶನಕ್ಕೆ ಮನೆಗೆ ಬರಬೇಡಿ, ಇಲ್ಲಿ ಇತರರಿಗೆ ತೊಂದರೆಯುಂಟು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಅಂತಿಮ ದರ್ಶನ ಪಡೆಯುವವರು ಸಂಜೆ ನೇರವಾಗಿ ಬೈಯಪ್ಪನಹಳ್ಳಿಯ ಕಲ್ಲಪ್ಪಳ್ಳಿ ಚಿತಾಗಾರಕ್ಕೆ ಬರುವಂತೆ ಅವರು ವಿನಂತಿ ಮಾಡಿಕೊಂಡಿದ್ದಾರೆ. ಈ ಮನವಿ ಕೇವಲ ಜನಸಾಮಾನ್ಯರಿಗೆ ಅಲ್ಲ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೂ ಅನ್ವಯಿಸುತ್ತದೆ ಎಂದು ಕುಟುಂಬ ಮಂದಿ ಹೇಳಿದ್ದಾರೆ. ಕಾರ್ನಾಡ್ ಅವರ ಆಸೆಯಂತೆ ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗಿರೀಶ್ ಕಾರ್ನಾಡ್ ಸೂಚಿಸಿರುವಂತೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಅಥವಾ ಇನ್ನಿತರ ಕಾರ್ಯಕ್ರಮವಾಗಲಿ ಹಮ್ಮಿಕೊಳ್ಳಲ್ಲ. ಅಂತ್ಯಕ್ರಿಯೆಯನ್ನು ಖಾಸಗಿಯಾಗಿಯೇ ನಡೆಸುತ್ತೇವೆ ಎಂದು ಕುಟುಂಬ ಸ್ಪಷ್ಟಪಡಿಸಿದೆ.
ಕಾರ್ನಾಡ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಬೇರೆ ಬೇರೆ ಮೂಲೆಗಳಿಂದ ರಾಜಕೀಯ ನಾಯಕರು, ರಂಗಭೂಮಿ ಕಲಾವಿದರು, ಸಾಹಿತ್ಯಲೋಕದ ದಿಗ್ಗಜರು, ಮಾಧ್ಯಮ ಮಂದಿ ಹಾಗೂ ಸಿನಿಮಾತಾರೆಯರು ಸಂತಾಪ ಸೂಚಿಸಿದ್ದಾರೆ.
Comments are closed.