
ಬೆಂಗಳೂರು: ಮಹಿಳೆಯ ಕೈಯಿಂದ ಮೈಕ್ ಎಳೆದ ಘಟನೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಟೀಕೆ ಕೇಳಿ ಬಂದ ನಂತರ ಎಚ್ಚರಗೊಂಡ ಸಿದ್ದರಾಮಯ್ಯ ಆಕೆ ನನ್ನ ಸೋದರಿ ಸಮಾನ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಟ್ವಿಟ್ಟರಿನಲ್ಲಿ ಸ್ಪಷ್ಟನೆ ನೀಡಿದ ಅವರು, ಇಂದು ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ ನಾನು ಬಲ್ಲ ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಗೆ ತಿರುಗೇಟು: ವರುಣಾ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಪಕ್ಷದ ಕಾರ್ಯಕರ್ತೆ ಜಮಲಾರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಘಟನೆಗೆ ರಾಜಕೀಯ ಬಣ್ಣ ಬಳಿಯುವ ಮೂಲಕ ಆ ಹೆಣ್ಣುಮಗಳನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲೆ ಇರುವ ಗೌರವ ಲೋಕಕ್ಕೆ ಗೊತ್ತು. ಇವರಿಂದ ನಾನು ಕಲಿಯುವುದೇನಿಲ್ಲ.
ನಡೆದಿದ್ದು ಏನು?
ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಬಳಿಕ ಸಭೆ ನಡೆಯಿತು. ಈ ವೇಳೆ ಜಮಾಲರ್ ಅವರು ನಿಮ್ಮ ಮಗ ಎಂಎಲ್‍ಎ ಆಗಿದ್ದಾರೆ. ಆದ್ರೆ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ ಎಂದು ಶಾಸಕ ಯತೀಂದ್ರ ಅವರ ವಿರುದ್ಧ ಟೇಬಲ್ ಕುಟ್ಟಿ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕೋಪಗೊಂಡ ಸಿದ್ದರಾಮಯ್ಯ ಎಲ್ಲರ ಎದುರೇ ಜಮಾಲರ್ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಸಿಡಿಮಿಡಿಗೊಂಡಿದ್ದಾರೆ.
ನಿಮ್ಮ ಮಗ ಕೈಗೆ ಸಿಗಲ್ಲ ಎಂದು ದೂರು ಹೇಳಿದಕ್ಕೆ ಕೆಂಡಮಂಡಲರಾದ ಸಿದ್ದರಾಮಯ್ಯ, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿದರು. ಅಷ್ಟೇ ಅಲ್ಲದೆ ಏನಮ್ಮ ನಾವು ದೇಶಕ್ಕೆ ಅನ್ಯಾಯ ಮಾಡಿರುವ ಥರ ಮಾತಾಡ್ತಿದ್ದೀಯಾ. ನನ್ನ ಮುಂದೆಯೇ ಟೇಬಲ್ ಕುಟ್ಟಿ ಮಾತನಾಡುತ್ತಿದ್ದಿಯಾ? ಕೂತ್ಕೊಳಮ್ಮ ಸುಮ್ಮನೆ ಎಂದು ಕೊನೆಗೆ ಮಹಿಳೆ ಬಳಿ ಇದ್ದ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶಿಸಿದ್ದರು.
Comments are closed.