ರಾಷ್ಟ್ರೀಯ

ಶಾಲೆಯಲ್ಲಿ ಸಂಸ್ಕೃತ ಶ್ಲೋಕ…: ಸಾಂವಿಧಾನಿಕ ಪೀಠದಿಂದ ವಿಚಾರಣೆ ಸಾಧ್ಯತೆ

Pinterest LinkedIn Tumblr


ನವದೆಹಲಿ: ಶಾಲೆಗಳಲ್ಲಿ ಮಕ್ಕಳಿಗೆ ಹೇಳಿಕೊಡುವ ಪ್ರಾರ್ಥನೆಗಳ ಮೇಲೆ ಸುಪ್ರೀಂ ಕೋರ್ಟ್ ಈಗ ನಿಗಾ ಇಟ್ಟಿದೆ. ಶಾಲೆಗಳಲ್ಲಿ ಸಂಸ್ಕೃತ ಮತ್ತು ಹಿಂದಿಯ ಶ್ಲೋಕ ಮತ್ತು ಮಂತ್ರಗಳ ಔಚಿತ್ಯದ ಬಗ್ಗೆ ಕೋರ್ಟ್ ತಕರಾರು ತೆಗೆದಿದೆ. ಈ ಶ್ಲೋಕಗಳ ಅಗತ್ಯತೆ ಕುರಿತು ಸಾಂವಿಧಾನಿಕ ಪೀಠದ ಮೂಲಕ ಸುಪ್ರೀಂ ಕೋರ್ಟ್ ಪರಾಮರ್ಶೆ ನಡೆಸುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ಅಧೀನದ ಕೇಂದ್ರೀಯ ವಿದ್ಯಾಲಯಗಳಲ್ಲಿ ಮಕ್ಕಳ ಪ್ರಾರ್ಥನೆಯ ಭಾಗವಾಗಿ ಸಂಸ್ಕೃತ ಮತ್ತು ಹಿಂದಿ ಮಂತ್ರ ಪಠನದ ಕಡ್ಡಾಯ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಸಾಂವಿಧಾನಿಕ ಪೀಠದಿಂದ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.

ನ್ಯಾ| ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ದ್ವಿಸದಸ್ಯ ಸುಪ್ರೀಂ ಪೀಠವು ಈ ಅಭಿಪ್ರಾಯಕ್ಕೆ ಬಂದಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಹೇಳಿಕೊಡುವ ಸಂಸ್ಕೃತ ಶ್ಲೋಕಗಳಲ್ಲಿ ಯಾವುದೇ ಧಾರ್ಮಿಕ ಛಾಯೆ ಇಲ್ಲ ಎಂಬ ಸರಕಾರದ ವಾದವನ್ನು ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಲಿಲ್ಲ. ಸುಪ್ರೀಂ ಕೋರ್ಟ್​ನ ಚಿಹ್ನೆಯಲ್ಲೇ ಸಂಸ್ಕೃತ ಶ್ಲೋಕ ಇದೆ ಎಂಬ ವಾದವೂ ಕೋರ್ಟ್​ಗೆ ಸಮಾಧಾನ ತರಲಿಲ್ಲ.

“ಬೆಳಗ್ಗಿನ ಶಾಲಾ ಪ್ರಾರ್ಥನೆಯಲ್ಲಿ ಹೇಳಿಕೊಡುವ ‘ಅಸತೋ ಮಾ ಸದ್ಗಮಯಾ…’ ಮಂತ್ರವು ನಿರ್ದಿಷ್ಟ ಧರ್ಮವನ್ನು ಸೂಚಿಸುವುದಿಲ್ಲ. ಅದರಲ್ಲಿರುವ ಅರ್ಥವು ಜಾಗತಿಕ ಸತ್ಯವಾಗಿದ್ದು, ಎಲ್ಲಾ ಧರ್ಮಗಳು ತಿಳಿಸುವ ಮಾರ್ಗವೇ ಆಗಿದೆ. ಅದು ಸಂಸ್ಕೃತ ಭಾಷೆಯಲ್ಲಿದೆ ಎಂದ ಮಾತ್ರಕ್ಕೆ ಅದು ಧಾರ್ಮಿಕ ಎನಿಸುವುದಿಲ್ಲ. ಹಾನೆಸ್ಟಿ ಈಸ್ ದ ಬೆಸ್ಟ್ ಪಾಲಿಸಿ ಎಂದು ಕ್ರೈಸ್ತರ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಅದು ಧಾರ್ಮಿಕ ಎನಿಸುತ್ತದಾ? ನನಗೆ ಹಾಗನಿಸುವುದಿಲ್ಲ” ಎಂದು ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಾಡಿದರು.

ಇದಕ್ಕೆ ಪ್ರತಿಯಾಗಿ ನ್ಯಾ| ನಾರಿಮನ್ ಅವರು, “ಅಸತೋ ಮಾ ಸದ್ಗಮಯಾ ಎಂಬುದನ್ನು ಉಪನಿಷದ್​ನಿಂದ ನೇರವಾಗಿ ಎರವಲು ಪಡೆಯಲಾಗಿದೆಯಲ್ಲ” ಎಂದು ಸಂದೇಹ ವ್ಯಕ್ತಪಡಿಸಿದರು.

ಆಗ ತುಷಾರ್ ಮೆಹ್ತಾ ಅವರು, ಭಗವದ್ಗೀತೆಯಲ್ಲಿ ಬರುವ ಉವಾಚವೊಂದನ್ನು ಸುಪ್ರೀಂ ಕೋರ್ಟ್​ನ ಅಧಿಕೃತ ಲೋಗೋದಲ್ಲಿ ಬಳಸಲಾಗಿರುವುದನ್ನು ನೆನಪಿಸಿದರು.

“ಈ ನ್ಯಾಯಾಲಯದ ಪ್ರತಿಯೊಬ್ಬ ನ್ಯಾಯಮೂರ್ತಿಯ ಹಿಂದೆ ಇರುವ ಚಿಹ್ನೆಯಲ್ಲಿ ‘ಯತೋ ಧರ್ಮಸ್ ತತೋ ಜಯಾ’ ಎಂಬ ಮಂತ್ರವಿದೆ. ಎಲ್ಲಿ ಧರ್ಮ ಇದೆಯೋ ಅಲ್ಲಿ ಜಯ ಇದೆ ಎಂಬುದು ಇದರರ್ಥ. ಇದರಲ್ಲಿ ಯಾವುದೇ ಧಾರ್ಮಿಕತೆಯಾಗಲೀ, ಕೋಮುವಾದವಾಗಲೀ ಇಲ್ಲ” ಎಂದು ಸಾಲಿಸಿಟರ್ ಜನರಲ್ ವಿವರಿಸಿದರು.

ಆದರೂ ಸುಪ್ರೀಂ ಕೋರ್ಟ್ ಪೀಠಕ್ಕೆ ಸಮಾಧಾನ ಆಗಲಿಲ್ಲ. ಈ ಪ್ರಕರಣವನ್ನು ಸಾಂವಿಧಾನಿಕ ಪೀಠದ ಪರಮಾರ್ಶೆಗೆ ಬಿಡುವುದು ಸರಿಯಾದ ಕ್ರಮ ಎಂಬ ಅಭಿಪ್ರಾಯಕ್ಕೆ ಬಂದಿತು. ಪ್ರಕರಣದ ವಿಚಾರಣೆಗೆ ಸಾಂವಿಧಾನಿಕ ಪೀಠ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಅವರ ಮುಂದೆ ಈ ಅರ್ಜಿಯನ್ನು ವರ್ಗಾಯಿಸಲು ನಿರ್ಧರಿಸಲಾಯಿತು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಮಕ್ಕಳಿಗೆ ಹೇಳಿಕೊಡುವ ಧಾರ್ಮಿಕ ಪ್ರಾರ್ಥನೆಗಳು ಹಿಂದೂ ಧರ್ಮದ ಪ್ರಚಾರ ಮಾಡುತ್ತವೆ. ಇದು ಸಂವಿಧಾನದ 19 ಮತ್ತು 28(1) ಪರಿಚ್ಛೇದಗಳ ಉಲ್ಲಂಘನೆಯಾಗಿದೆ ಎಂದು ಜಬಲಪುರ್​ನ ವಕೀಲ ವಿನಾಯಕ್ ಷಾ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.

2013ರಿಂದಲೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯನ್ನು ‘ಅಸತೋ ಮಾ ಸದ್ಗಮಯಾ..’ ಶ್ಲೋಕದ ಮೂಲಕ ಪ್ರಾರಂಭಿಸಲಾಗುತ್ತದೆ. ಸಂಜೆ ‘ಓಂ ಸಹ ನಾವವತು’ ಎಂಬ ಮತ್ತೊಂದು ಸಂಸ್ಕೃತ ಶ್ಲೋಕದ ಮೂಲಕ ಅಂತ್ಯಗೊಳಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ತೊಡಕಾಗುತ್ತಿದೆ. ಮಕ್ಕಳು ಸಮಸ್ಯೆಗಳಿಗೆ ವಾಸ್ತವಿಕ ಪರಿಹಾರ ಕಂಡುಕೊಳ್ಳುವ ಬದಲು ಎಲ್ಲಕ್ಕೂ ದೇವರ ಮೊರೆ ಹೋಗುವ ಪ್ರವೃತ್ತಿ ಬೆಳೆಸುತ್ತದೆ ಎಂಬುದು ವಿನಾಯಕ್ ಷಾ ಅವರ ವಾದವಾಗಿದೆ.

Comments are closed.