ರಾಷ್ಟ್ರೀಯ

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಸತ್ತವನೇ ನಿಜವಾದ ಕೊಲೆಗಾರ

Pinterest LinkedIn Tumblr


ಭೋಪಾಲ್: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸುದ್ದಿಯಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಹಿಮ್ಮತ್ ಪಾಟೀದಾರ್​ನ ಹತ್ಯೆ ಪ್ರಕರಣದಲ್ಲಿ ಈಗ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ. ರತ್​ಲಮ್ ಜಿಲ್ಲೆಯ 36 ವರ್ಷದ ಹಿಮ್ಮತ್ ಜೀವಂತವಾಗಿರುವ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ ಕೊಲೆಯಾಗಿದ್ದೇ ಬೇರೆ. ಇನ್ಷೂರೆನ್ಸ್ ಹಣಕ್ಕಾಗಿ ಹಿಮ್ಮತ್ ಪಾಟೀದಾರ್ ಸೃಷ್ಟಿಸಿದ ಮಹಾ ನಾಟಕ ಅದಾಗಿತ್ತು. ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮದನ್ ಮಾಳವೀಯ(32) ಎಂಬಾತನನ್ನು ಹತ್ಯೆ ಮಾಡಿ, ಆ ಶವ ತನ್ನದೆಂದು ಹಿಮ್ಮತ್ ಬಿಂಬಿಸಿದ್ದನೆಂದು ಪೊಲೀಸರು ಹೇಳಿದ್ದಾರೆ. ಶವದ ಡಿಎನ್​ಎ ಪರೀಕ್ಷೆಯಲ್ಲೂ ಇದು ರುಜುವಾತಾಗಿದೆ. ಪರಾರಿಯಾಗಿರುವ ಹಿಮ್ಮತ್ ಪಾಟೀದಾರ್​ನನ್ನು ಪೊಲೀಸರು ಸದ್ಯ ಹುಡುಕುತ್ತಿದ್ದಾರೆ.

ಜನವರಿ 23ರಂದು ರತ್​ಲಮ್ ಜಿಲ್ಲೆಯ ಕಾಮೆದ್ ಎಂಬ ಗ್ರಾಮದ ಹೊಲದಲ್ಲಿ ಶವವೊಂದು ಪತ್ತೆಯಾಗಿರುತ್ತದೆ. ಕತ್ತು ಸೀಳಿ ಕೊಲೆ ಮಾಡಲಾಗಿರುತ್ತದೆ. ಮುಖವನ್ನು ಗುರುತು ಸಿಗದಂತೆ ಸುಟ್ಟುಹಾಕಲಾಗಿರುತ್ತದೆ. ಆದರೆ, ದೇಹದ ಆಕಾರ, ಬಟ್ಟೆ ಎಲ್ಲವೂ ಹಿಮ್ಮತ್ ಪಾಟೀದಾರ್​ಗೆ ಹೋಲಿಕೆಯಾಗಿರುತ್ತದೆ. ಹಿಮ್ಮತ್ ಪಾಟೀದಾರ್ ಅವರ ತಂದೆಯು ತಮ್ಮ ಮಗ ಕೊಲೆಯಾಗಿದ್ಧಾನೆಂದು ಪೊಲೀಸರಿಗೆ ದೂರು ಕೊಡುತ್ತಾರೆ. ಅಲ್ಲಿಗೆ, ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ ಎಂದು ಈ ಪ್ರಕರಣವು ರಾಜಕೀಯ ಬಣ್ಣ ಪಡೆಯುತ್ತದೆ. ವಿಪಕ್ಷದಲ್ಲಿರುವ ಬಿಜೆಪಿಗೆ ಸರಕಾರದ ಮೇಲೆ ಹರಿಹಾಯಲು ಹೊಸ ಅಸ್ತ್ರ ಸಿಗುತ್ತದೆ. ಬಿಜೆಪಿ ನಾಯಕರು ಹೇಳಿಕೆ ಮೇಲೆ ಹೇಳಿಕೆ ಕೊಟ್ಟು ಕಾಂಗ್ರೆಸ್ ಸರಕಾರದ ಮೇಲೆ ವಾಗ್ದಾಳಿ ನಡೆಸುತ್ತಾರೆ.

ಆದರೆ, ಕೆಲವೇ ದಿನಗಳಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ಸಂಶಯಗಳು ಕಾಣತೊಡಗುತ್ತವೆ. ಶವದ ಸಮೀಪದಲ್ಲಿ ಡೈರಿಯೊಂದು ಹಲವು ಸುಳಿವನ್ನು ಬಿಟ್ಟುಕೊಡುತ್ತದೆ. ಆ ಡೈರಿಯಲ್ಲಿ ಪಾಟೀದಾರ್​ನ ಇನ್ಷೂರೆನ್ಸ್ ಪಾಲಿಸಿ ನಂಬರ್, ಬ್ಯಾಂಕ್​ನ ಫಿಕ್ಸೆಡ್ ಡೆಪಾಸಿಟ್, ಪಿನ್ ನಂಬರ್ ಇತ್ಯಾದಿ ವಿವರಗಳಿರುತ್ತವೆ. ಅಷ್ಟೇ ಅಲ್ಲದೆ, ಶವದಲ್ಲಿದ್ದ ಮೊಬೈಲ್ ಫೋನ್​ನಲ್ಲಿ ದೂರವಾಣಿ ಕರೆಯ ವಿವರವನ್ನೆಲ್ಲಾ ಅಳಿಸಿಹಾಕಲಾಗಿರುತ್ತದೆ. ಇದು ಪೊಲೀಸರಿಗೆ ಸಂಶಯದ ವಾಸನೆ ಬಿತ್ತಿ, ಶವದ ಡಿಎನ್​ಎ ಪರೀಕ್ಷೆಗೆ ದಾರಿ ಮಾಡಿಕೊಡುತ್ತದೆ.

ಶವದ ಡಿಎನ್​ಎಗೂ ಹಿಮ್ಮತ್ ಪಾಟೀದಾರ್​ನ ತಂದೆಯ ಡಿಎನ್​ಎಗೂ ಹೊಂದಿಕೆಯಾಗುವುದಿಲ್ಲ. ಆಗ ಪೊಲೀಸರಿಗೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಂತಾಗುತ್ತದೆ. ಈ ಹತ್ಯೆ ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಪಾಟೀದಾರ್​ನ ತೋಟದಲ್ಲಿ ಕೆಲಸ ಮಾಡುವ ಕೂಲಿ ಮದನ್ ಮಾಳವೀಯ ಎಂಬಾತ ನಾಪತ್ತೆಯಾಗಿರುತ್ತಾನೆ. ಈ ಕೂಲಿಕಾರನ ಸಂಬಂಧಿಕರ ಡಿಎನ್​ಎ ಜೊತೆ ತಾಳೆ ಮಾಡುತ್ತಾರೆ. ಆಗ ಎರಡೂ ಡಿಎನ್​ಎ ಹೊಂದಿಕೆಯಾಗುವುದರೊಂದಿಗೆ ಪೊಲೀಸರಿಗೆ ಸ್ಪಷ್ಟ ಸುಳಿವು ಸಿಕ್ಕುತ್ತದೆ. ನಂತರ, ಮದನ್​ ಹೆಂಡತಿ ಕೂಡ ಶವದ ಗುರುತು ಹಿಡಿದು ಅದು ತನ್ನ ಗಂಡನದೇ ಎಂದು ಪತ್ತೆ ಹಚ್ಚುತ್ತಾರೆ.

ಇನ್ಷೂರೆನ್ಸ್​ಗಾಗಿ ನಡೆದ ಕೊಲೆ:

ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಹಿಮ್ಮತ್ ಪಾಟೀದಾರ್, ಈ ಸಮಸ್ಯೆಯಿಂದ ಹೊರಬರಲು ಮಹಾ ಷಡ್ಯಂತ್ರ ರಚಿಸುತ್ತಾನೆ. 20 ಲಕ್ಷ ಮೊತ್ತದ ಇನ್ಷೂರೆನ್ಸ್ ಪಡೆಯಲು ತನ್ನ ಸಾವಿನ ನಾಟಕ ಆಡಿದ್ದಾನೆಂಬುದು ಪೊಲೀಸರ ಶಂಕೆ. ಅದಕ್ಕಾಗಿ ತನ್ನ ತೋಟದಲ್ಲಿ ಕೆಲಸ ಮಾಡುವ ಮದನ್​ನನ್ನು ಹತ್ಯೆ ಮಾಡಿ, ಅದು ತನ್ನದೇ ಶವ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾನೆ. ತನ್ನ ಕೆಲ ವಸ್ತುಗಳನ್ನ ಶವದ ಬಳಿ ಬೇಕಂತಲೇ ಬಿಟ್ಟು ಹೋಗುತ್ತಾನೆ. ಆದರೆ, ಶವದ ಬಟ್ಟೆಯನ್ನ ಬದಲಿಸುವ ಹಿಮ್ಮತ್, ಚೆಡ್ಡಿಯನ್ನ ಮಾತ್ರ ಹಾಗೆಯೇ ಬಿಟ್ಟಿರುತ್ತಾನೆ. ಪ್ರಕರಣದಲ್ಲಿ ಸುಳಿವು ನೀಡಿದವುಗಳಲ್ಲಿ ಈ ಚೆಡ್ಡಿಯೂ ಒಂದು. ಆದರೆ, ಪೊಲೀಸರಿಗೆ ಸದ್ಯಕ್ಕೆ ಸ್ಪಷ್ಟವಾಗಿರುವ ಸಂಗತಿ ಎಂದರೆ ಕೊಲೆಯಾಗಿರುವುದು ಮದನ್ ಮಾಳವೀಯ ಎಂಬ ವ್ಯಕ್ತಿ. ಹಾಗೆಯೇ, ಶವಕ್ಕೆ ಹಿಮ್ಮತ್​ನ ಬಟ್ಟೆಗಳನ್ನ ತೊಡಿಸಿ ಬೇರೆಯೇ ಸಂಚು ರೂಪಿಸಿರುವುದು ಖಚಿತವಾಗಿದೆ.

ಈಗ ನಾಪತ್ತೆಯಾಗಿರುವ ಹಿಮ್ಮತ್ ಪಾಟೀದಾರ್​ನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ. ಈತನ ಸುಳಿವು ನೀಡಿದವರಿಗೆ 10 ಸಾವಿರ ರೂ ಬಹುಮಾನ ಕೊಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಈ ಮಹಾ ನಾಟಕದಲ್ಲಿ ಹಿಮ್ಮತ್​ನ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರಾ ಎಂಬ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾರು ಈ ಹಿಮ್ಮತ್?

ಹಿಮ್ಮತ್ ಪಾಟೀದಾರ್ ಮತ್ತವನ ಕುಟುಂಬದವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ಹಿಮ್ಮತ್ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದರಾದರೂ ಸಕ್ರಿಯ ಕಾರ್ಯಕರ್ತನಾಗಿರಲಿಲ್ಲ. ಈತನ ಸೋದರ ಸಂಜಯ್ ಪಾಟೀದಾರ್ ಆರೆಸ್ಸೆಸ್ ವಾದ್ಯಗೋಷ್ಠಿಯೊಂದಿಗೆ ಜೋಡಿತವಾಗಿದ್ದಾರೆನ್ನಲಾಗಿದೆ.

Comments are closed.