ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಹುಲ್ ಹುಟ್ಟುಹಬ್ಬದಂದು ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ.
ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಜೊತೆಯಿರುವ ಫೋಟೋ ಹಾಕಿ, “ಶಿಸ್ತು, ತತ್ವ, ಗುರಿ ಹೀಗೆ ಹೇಳುತ್ತಾ ಹೋದರೆ ದೊಡ್ಡ ಲಿಸ್ಟ್ ಆಗುತ್ತದೆ. ರಾಹುಲ್ ಅವರು ಲೆಜೆಂಡ್ ಆಗಿದ್ದು, ಅವರು ಈ ಲಿಸ್ಟ್ ಗೆ ಮಾದರಿ. ನಾನು ಇಷ್ಟಪಡುವ ವ್ಯಕ್ತಿ ಅಂದರೆ ರಾಹುಲ್. ಅವರು ಅತ್ಯುತ್ತಮ ಆಟಗಾರ. ಅವರು ಪದಗಳಲ್ಲಿ ಕಡಿಮೆ ಮಾತನಾಡಿ ಆ್ಯಕ್ಷನ್ಗಳಲ್ಲಿ(ತಮ್ಮ ಕೆಲಸಗಳಲ್ಲಿ) ಹೆಚ್ಚು ಮಾತನಾಡುತ್ತಾರೆ. ಈ ಸಾಧಕನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಅವರು 1973ರಲ್ಲಿ ಇಂದೋರ್ ನಲ್ಲಿ ಜನಿಸಿದ್ದರು. ಬಳಿಕ ಅವರ ಪೋಷಕರು ಕರ್ನಾಟಕಕ್ಕೆ ಶಿಫ್ಟ್ ಆದರು. ಹೀಗಾಗಿ ರಾಹುಲ್ ಅವರು ಕರ್ನಾಟಕದಲ್ಲಿಯೇ ಬೆಳೆದರು. ಅಲ್ಲದೇ ರಾಹುಲ್ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಎಂಬಿಎ ಮಾಡುತ್ತಿದ್ದಾಗ ಭಾರತ ತಂಡಕ್ಕೆ ಆಯ್ಕೆ ಆಗಿದ್ದರು. ರಾಹುಲ್ ಅವರು ಕ್ರಿಕೆಟ್ ಮಾತ್ರವಲ್ಲದೇ ರಾಜ್ಯಮಟ್ಟದ ಹಾಕಿ ಆಟಗಾರ ಕೂಡ ಆಗಿದ್ದಾರೆ. 1996ರಲ್ಲಿ ನಡೆದ ಸಿಂಗರ್ ಕಪ್ನಲ್ಲಿ ರಾಹುಲ್ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.
ರಾಹುಲ್ ಅವರಿಗೆ ಪದ್ಮಶ್ರೀ ಹಾಗೂ ಪದ್ಮವಿಭೂಶಣ ಪ್ರಶಸ್ತಿ ಕೂಡ ದೊರೆತಿದೆ. 164 ಟೆಸ್ಟ್ ಪಂದ್ಯದಲ್ಲಿ ರಾಹುಲ್ 13,288 ರನ್ ಸಿಡಿಸಿದ್ದಾರೆ. ಅದರಲ್ಲಿ 36 ಶತಕ ಹಾಗೂ 63 ಅರ್ಧ ಶತಕವನ್ನು ಭಾರಿಸಿದ್ದಾರೆ. 344 ಏಕದಿನ ಪಂದ್ಯದಲ್ಲಿ ರಾಹುಲ್ 12 ಶತಕ ಹಾಗೂ 83 ಅರ್ಧ ಶತಕ ಭಾರಿಸಿದ್ದಾರೆ. ರಾಹುಲ್ ಸ್ಲಿಪ್ನಲ್ಲಿ 210 ಕ್ಯಾಚ್ ಪಡೆದು ವಿಶ್ವ ದಾಖಲೆಯನ್ನು ಮಾಡಿದ್ದಾರೆ.
Comments are closed.