ಗಲ್ಫ್

ನಾನು ಇಲ್ಲಿ ಮನ್‌ ಕಿ ಬಾತ್‌ ಹೇಳಲು ಬಂದಿಲ್ಲ, ನಿಮ್ಮ ಮನದ ಮಾತು ಆಲಿಸಲು ಬಂದಿದ್ದೇನೆ: ದುಬೈನಲ್ಲಿ ರಾಹುಲ್‌ ಗಾಂಧಿ

Pinterest LinkedIn Tumblr

ದುಬೈ: ನಾನು ‘ಮನ್ ಕೀ ಬಾತ್’ ಹೇಳುವುದಕ್ಕೆ ಇಲ್ಲಿಗೆ ಬಂದಿಲ್ಲ. ನಿಮ್ಮ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ.

ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ದುಬೈನ ಜಬಲ್‌ ಅಲಿ ಲೇಬರ್‌ ಕಾಲೋನಿಯಲ್ಲಿ ಭಾರತೀಯ ಕಾರ್ಮಿಕರನ್ನು ಉದ್ದೇಶಿಸಿ ”ನಾನಿಲ್ಲಿ ನನ್ನ ಮನ್‌ ಕಿ ಬಾತ್‌ ಹೇಳಲು ಬಂದಿಲ್ಲ, ಬದಲಿಗೆ ನಿಮ್ಮ ಮನದ ಮಾತು ಆಲಿಸಲು ಬಂದಿದ್ದೇನೆ” ಎಂದು ಹೇಳುವ ಮೂಲಕ ರಾಹುಲ್‌, ಮೋದಿ ಅವರ ಮಾಸಿಕ ರೇಡಿಯೊ ಭಾಷಣ ‘ಮನ್‌ ಕಿ ಬಾತ್‌’ಅನ್ನು ಲೇವಡಿ ಮಾಡಿದರು.

”ಮೋದಿ ಸರಕಾರ ಉಳ್ಳವರ ಪರವಿದೆ. ಕಾರ್ಮಿಕರು, ರೈತರಿಗೆ ಯಾವ ನೆರವನ್ನೂ ಕೈಗೊಂಡಿಲ್ಲ. ಅವರ ದೊಡ್ಡ ದೊಡ್ಡ ಭಾಷಣಗಳಿಂದ ಜನರ ಹೊಟ್ಟೆ ತುಂಬದು” ಎಂದು ಆರೋಪಿಸಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳು ಬಿಜೆಪಿಯನ್ನು ಸೋಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

”ದುಬೈ ನಗರದ ಅಭಿವೃದ್ಧಿಯ ಪಾಲುದಾರರು ನೀವು. ಇಲ್ಲಿನ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು, ವಿಶಾಲ ರಸ್ತೆಗಳು, ವಿಮಾನ ನಿಲ್ದಾಣಗಳು ಪ್ರತಿಯೊಂದರ ನಿರ್ಮಾಣದಲ್ಲೂ ನಿಮ್ಮ ಬೆವರು, ರಕ್ತ ಹರಿದಿದೆ. ಹೊಟ್ಟೆಪಾಡಿಗೆ ನೀವು ಇಲ್ಲಿಗೆ ಬಂದು ಸಂಕಷ್ಟಗಳ ಮಧ್ಯೆಯೇ ಭಾರತದ ಹೆಮ್ಮೆ ಹೆಚ್ಚಿಸಿದಿರಿ” ಎಂದು ಕಾರ್ಮಿಕರನ್ನು ಕೊಂಡಾಡಿದರು. ನಿಮ್ಮ ಸಮಸ್ಯೆಗಳಿಗೆ ನಮ್ಮ ಪಕ್ಷ ಸದಾ ಸ್ಪಂದಿಸಲಿದೆ ಎಂದರು.

ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಂಧ್ರದ ಜನತೆ ಕಾಂಗ್ರೆಸ್‌ ಕೈಹಿಡಿದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿದೆ ಎಂದು ಆಂಧ್ರ ಮೂಲದ ಕಾರ್ಮಿಕರಿಗೆ ಭರವಸೆ ನೀಡಿದರು.

ಉದ್ಯಮಿಗಳ ಜತೆ ಸಭೆ
ಕಾರ್ಮಿಕರ ಭೇಟಿಗೂ ಮುನ್ನ ರಾಹುಲ್‌ ಗಾಂಧಿ ಅವರು, ಕರ್ನಾಟಕದ ಕರಾವಳಿ ಮೂಲದ ಖ್ಯಾತ ಉದ್ಯಮಿ ಡಾ.ಬಿ.ಆರ್‌.ಶೆಟ್ಟಿ ಸೇರಿದಂತೆ ಅನೇಕ ದುಬೈ ಉದ್ಯಮಿಗಳ ಜತೆ ಸಭೆ ನಡೆಸಿ ಹಲವು ವಿಷಯಗಳನ್ನು ಚರ್ಚಿಸಿದರು. ರಾಹುಲ್‌, ಶನಿವಾರ ಅಬುಧಾಬಿಗೆ ಭೇಟಿ ನೀಡುವ ಕಾರ‍್ಯಕ್ರಮವಿದೆ.

Comments are closed.