ಕರಾವಳಿ

ಮಂದಿರ ನಿರ್ಮಾಣಕ್ಕಾಗಿ ಮಸೂದೆ ಹೊರಡಿಸಲು ಆಗ್ರಹಿಸಿ ನವೆಂಬರ್ 25ರಂದು ಮಂಗಳೂರಿನಲ್ಲಿ “ಜನಾಗ್ರಹ ಸಭೆ”

Pinterest LinkedIn Tumblr

ಮಂಗಳೂರು, ನವೆಂಬರ್.14: ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ನ.25ರಂದು ಸಂಜೆ 4 ಗಂಟೆಗೆ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಹಿಂಪ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಸಂಸತ್‌ನಲ್ಲಿ ಮಸೂದೆ ಹೊರಡಿಸಬೇಕು ಎಂದು ಆಗ್ರಹಿಸಿ ಈ ಜನಾಗ್ರಹ ಸಭೆ ಆಯೋಜಿಸಲಾಗಿದೆ. ಜನಾಗ್ರಹ ಸಭೆಯ ಹಿನ್ನೆಲೆಯಲ್ಲಿ ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಕೇಂದ್ರದ ನೆಹರೂ ಮೈದಾನದವರೆಗೆ ಅಪರಾಹ್ನ 3:30ಕ್ಕೆ ಮೆರವಣಿಗೆ ಮತ್ತು ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ವಿಎಚ್‌ಪಿ ಮುಖಂಡರು ಹಾಗೂ ಪ್ರಮುಖ ಭಾಷಣಕಾರರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಶ್ರೀ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಆರಂಭಗೊಂಡ ಆಂದೋಲನ ಸಾಧು-ಸಂತರ ಆಶೀರ್ವಾದದಿಂದ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ರಾಮಮಂದಿರ ನಿರ್ಮಾಣ ಕುರಿತಂತೆ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಾಗಿದೆ. ಹೀಗಾಗಿ ಈಗ ಎದುರಾಗಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಪ್ರೊ.ಎಂ.ಬಿ.ಪುರಾಣಿಕ್ ಒತ್ತಾಯಿಸಿದರು.

ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಮೂಲಕ ನಿವಾರಿಸಬೇಕು ಎಂದು ಆಗ್ರಹಿಸಿ ಜನಾಗ್ರಹ ಸಭೆ ನಡೆಸುವಂತೆ ಹೊಸದಿಲ್ಲಿಯಲ್ಲಿ ನಡೆದ ಸಾಧು-ಸಂತರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸಭೆ ನಡೆಯಲಿದೆ. ನ.25ರಂದು ಮಂಗಳೂರಿನಲ್ಲಿ ಸಾಧು-ಸಂತರ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ಎಂ.ಬಿ.ಪುರಾಣಿಕ್ ನುಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಮಸೂದೆ ಮಂಡಿಸುವಂತೆ ಆಗ್ರಹಿಸಿ ಪ್ರತೀ ಜಿಲ್ಲೆಯಲ್ಲೂ ವಿಹಿಂಪ ನೇತೃತ್ವದಲ್ಲಿ ಜನಾಗ್ರಹ ಸಭೆಗಳನ್ನು ಆಯೋಜಿಸಲಾಗಿದೆ. ಅದರಂತೆ ನ.18ರಂದು ಕಾಸರಗೋಡಿನಲ್ಲಿ, ನ.30ರಂದು ಕೊಡಗಿನಲ್ಲಿ ಹಾಗೂ ಡಿ.2ರಂದು ಉಡುಪಿಯಲ್ಲಿ ಸಭೆ ನಡೆಯಲಿದೆ ಎಂದು ಪ್ರೊ. ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಸಹ ಕಾರ್ಯದರ್ಶಿ ಪ್ರದೀಪ್, ಬಜರಂಗದಳ ಸಹಸಂಚಾಲಕ ಪುನೀತ್ ಉಪಸ್ಥಿತರಿದ್ದರು.

Comments are closed.