
ಬೆಂಗಳೂರು: ಅನಂತಕುಮಾರ್ ವಿಧಿವಶರಾದ ಬೆನ್ನಲ್ಲೇ ಈಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆ ಆರಂಭವಾಗಿದೆ. ಸತತ ಆರು ಬಾರಿ ಬೆಂಗಳೂರು ಲೋಕಸಭಾ ಕ್ಷೇತ್ರವನ್ನ ಪ್ರತಿನಿಧಿಸಿದವರು ಆನಂತಕುಮಾರ್. ಬೆಂಗಳೂರು ಲೋಕಸಭಾ ಕ್ಷೇತವನ್ನು ಅದೃಷ್ಟದ ಕ್ಷೇತ್ರ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣವಾದವರು ಅನಂತ ಕುಮಾರ್. ಮೂರು ಬಾರಿ ಕೇಂದ್ರ ಸಚಿವರಾದರು. ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣವಾದ ಕ್ಷೇತ್ರ ಬೆಂಗಳೂರು ದಕ್ಷಿಣ. ಹಾಗಾಗಿ ಅನಂತಕುಮಾರ್ ಅವರಿಂದ ತೆರವಾಗಿರುವ ಈ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು? ಯಾರ ಹೆಸರು ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿದೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರ ಹೇಳಿ ಕೇಳಿ ಬಿಜೆಪಿಯ ಭದ್ರಕೋಟೆ. ಸ್ವಲ್ಪ ಪ್ರಯತ್ನ ಪಟ್ಟರೂ ಬಿಜೆಪಿಯ ಅಭ್ಯರ್ಥಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವಂಥ ಪರಿಸ್ಥಿತಿ ಇದೆ. ಇಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ನೀ ಮುಂದು ನಾ ಮುಂದು ಎಂದು ಜೋರು ಪೈಪೋಟಿಯೇ ಇದೆ. ಅನಂತಕುಮಾರ್ ಅವರ ಶಿಷ್ಯ ಹಾಗೂ ಮಾಜಿ ಡಿಸಿಎಂ ಆರ್. ಅಶೋಕ್, ಯುವ ಮುಖಂಡ ವಿ. ಸೋಮಣ್ಣ ಅವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಯುವ ಮುಖಂಡ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರೂ ಇಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆನ್ನಲಾಗಿದೆ. ಇದರ ಜೊತೆಗೆ ಅನಂತಕುಮಾರ್ ಅವರ ಸೋದರ ನಂದಕುಮಾರ್ ಅವರ ಹೆಸರೂ ಆಕಾಂಕ್ಷಿಗಳ ಲಿಸ್ಟ್ನಲ್ಲಿದೆ.
ನ್ಯೂಸ್18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಜೆಪಿ ಹೈಕಮಾಂಡ್ನ ಮನಸ್ಸಿನಲ್ಲಿ ಬೇರೆಯೇ ಹೆಸರಿದೆಯಂತೆ. 2019ರ ಚುನಾವಣೆಯಲ್ಲಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆಯೇ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೊಡುವ ಸಾಧ್ಯತೆ ಇದೆ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೊಡಲು ಅಮಿತ್ ಷಾ ಮತ್ತು ನರೇಂದ್ರ ಮೋದಿ ಕೂಡ ಇಚ್ಛಿಸಿರುವ ಸಂಗತಿ ತಿಳಿದುಬಂದಿದೆ. ಆದರೆ, ತೇಜಸ್ವಿನಿ ಅನಂತಕುಮಾರ್ ಅವರ ಮನಸ್ಸಲ್ಲಿ ಏನಿದೆ ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಷಾ ಮತ್ತು ಮೋದಿ ಒತ್ತಾಯಿಸಿದರೆ ಸ್ಪರ್ಧಿಸಲು ಆಗೊಲ್ಲ ಎನ್ನುವಂಥ ಸ್ಥಿತಿಯಲ್ಲಿ ಅವರಿಲ್ಲ ಎಂಬುದು ನಿಶ್ಚಿತ.
ತೇಜಸ್ವಿನಿ ಅನಂತಕುಮಾರ್ ಕೇವಲ ಗೃಹಿಣಿಯಾಗಿ ಉಳಿದಿಲ್ಲ. ಅವರು ಸಾಮಾಜಿಕವಾಗಿ ಬಹಳ ಸಕ್ರಿಯವಾಗಿದ್ದಾರೆ. ‘ಅದಮ್ಯ ಚೇತನ’ ಎಂಬ ಎನ್ಜಿಓ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷಾತೀತವಾಗಿ ಬಹಳಷ್ಟು ಜನರು ಈ ಸಂಸ್ಥೆಯೊಂದಿಗೆ ಸ್ವಯಂಪ್ರೇರಿತವಾಗಿ ಜೋಡಿಸಿಕೊಂಡಿರುವುದು ವಿಶೇಷ. ಹಾಗೆಯೇ, ಎರಡು ದಶಕಗಳಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪತಿಯೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದ ತೇಜಸ್ವಿನಿ ಅವರಿಗೆ ಈ ಕ್ಷೇತ್ರದ ಇಂಚಿಂಚೂ ಮಾಹಿತಿ ಇದೆ. ಕ್ಷೇತ್ರಗಳ ಒಳಹೊರಗು ಅವರಿಗೆ ಗೊತ್ತಿರದೇ ಇರದು. ಹಾಗೆಯೇ, ಅನಂತಕುಮಾರ್ ಸಾವಿನ ನಂತರ ಸೃಷ್ಟಿಯಾಗಬಹುದಾದ ಅನುಕಂಪದ ಅಲೆ ಹಾಗೂ ಮಹಿಳೆ ಎಂಬ ಬಲವಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಪಾಲಿಗೆ ತೇಜಸ್ವಿನಿ ಅನಂತಕುಮಾರ್ ಅವರು ಸಹಜ ಆಯ್ಕೆಯಾಗಿದ್ದಾರೆ.
ಕೆಲ ಮೂಲಗಳ ಪ್ರಕಾರ, ತೇಜಸ್ವಿನಿ ಅನಂತಕುಮಾರ್ ಅವರು ರಾಜಕಾರಣಕ್ಕೆ ಬರದೆ ತಮ್ಮ ಅದಮ್ಯ ಚೇತನ ಸಂಸ್ಥೆ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುವ ಇಚ್ಛೆ ಹೊಂದಿದ್ದಾರಂತೆ. ಬಿಜೆಪಿಯಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಅವರ ಜೊತೆ ಸೌಹಾರ್ದಯುತವಾಗಿ ಕೆಲಸ ಮಾಡಿಕೊಂಡು ಹೋಗುವುದಾಗಿ ಅವರು ಮನಸು ಮಾಡಿದ್ದಾರಂತೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲು ತೇಜಸ್ವಿನಿ ಒಪ್ಪಿಕೊಂಡಲ್ಲಿ ಅನೇಕ ಆಕಾಂಕ್ಷಿಗಳ ಆಸೆ ಕಮರಿಹೋಗುವುದಂತೂ ನಿಶ್ಚಿತ. ಒಂದು ವೇಳೆ, ಅವರು ಹೈಕಮಾಂಡ್ನ ಆಫರನ್ನು ನಯವಾಗಿ ತಿರಸ್ಕರಿಸಿದ್ದೇ ಆದಲ್ಲಿ ಕ್ಷೇತ್ರದ ಟಿಕೆಟ್ಗೆ ತೀವ್ರ ಪೈಪೋಟಿ ಏರ್ಪಡಲಿದೆ. ಈಗ ಎಲ್ಲವೂ ತೇಜಸ್ವಿನಿ ಅನಂತಕುಮಾರ್ ಅವರ ನಿರ್ಧಾರದ ಮೇಲೆ ನಿಂತಿರುವಂತಿದೆ.
Comments are closed.