
ಬೆಂಗಳೂರು: ಸಚಿವ ಅನಂತ ಕುಮಾರ್ ಅವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಅದನ್ನು ವಿಕೃತವಾಗಿ ಬಿಂಬಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಮ್ಸ್ ಫೇಸ್ಬುಕ್ ಪೇಜ್ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸರು ಸೋಮವಾರ ಮಂಗಳೂರು ಮುಸ್ಲಿಮ್ಸ್ ಪೇಜ್ ಅಡ್ಮಿನ್ ವಿರುದ್ಧ ಮುಸ್ಲಿಂ ಸಮುದಾಯದ ಮುಖಂಡರ ಒತ್ತಾಯದ ಮೇರೆಗೆ ದೂರು ದಾಖಲಿಸಿದ್ದಾರೆ.
ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ದ್ವೇಷ ಸಂದೇಶ ಪಸರಿಸುವ ಪೇಜ್ ವಿರುದ್ಧ ಜನರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಜತೆಗೆ ಈ ಹಿಂದೆಯೂ ಹಲವು ಬಾರಿ ಅವಹೇಳನಕಾರಿ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದ ಮಂಗಳೂರು ಮುಸ್ಲಿಮ್ಸ್ ಪೇಜ್ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳೂ ಜನರಿಂದ ಕೇಳಿಬಂದಿದ್ದವು.
…………………….
ವ್ಯಾಪಕ ಖಂಡನೆ
ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ನಾಡೇ ಕಂಬನಿ ಮಿಡಿದಿದ್ದರೆ, ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್ಬುಕ್ ಪುಟವೊಂದರಲ್ಲಿ ಸಂಘಟನೆಯೊಂದು ಅವಹೇಳನಕಾರಿ ಪೋಸ್ಟ್ಗಳನ್ನು ಪ್ರಕಟಿಸಿ ವಿಕೃತಿ ಮೆರೆದಿದೆ.
ಅನಂತ್ ಕುಮಾರ್ ಅವರನ್ನು ಕೋಮುವಾದಿ ಎಂದಿರುವ ಸಂಘಟನೆ, ‘ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತಕುಮಾರ್ ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಬೇಡ’ ಎಂಬ ಒಕ್ಕಣೆಯೊಂದಿಗೆ ಪೋಸ್ಟ್ ಮಾಡಿದೆ.
ಈ ಪೋಸ್ಟ್ಗೆ ಫೇಸ್ಬುಕ್ ಬಳಕೆದಾರರು ಸಂಘಟನೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವಾಚ್ಯ ಶಬ್ಧಗಳಿಂದ ಸಂಘಟನೆಯನ್ನು ನಿಂದಿಸಿದ್ದಾರೆ.
ಅಲ್ಲದೆ ಇಂತಹ ಪೋಸ್ಟ್ ಮಾಡಿರುವುದು ಅಕ್ಷಮ್ಯ ಎಂದು ಮುಸ್ಲಿಂ ಸಮುದಾಯದ ಪ್ರಜ್ಞಾವಂತರೇ ಪ್ರತಿಕ್ರಿಯೆ ನೀಡಿದ್ದು, ಫೇಸ್ ಬುಕ್ ಖಾತೆಗೂ ಮಂಗಳೂರು ಮುಸ್ಲಿಮರಿಗೂ ಯಾವುದೇ ಸಂಬಂಧ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.
Comments are closed.