ಕರ್ನಾಟಕ

ಝಿಕಾ ವೈರಸ್​ ಕುರಿತು ಸಂಪೂರ್ಣ ಮಾಹಿತಿ

Pinterest LinkedIn Tumblr


ಬೆಂಗಳೂರು: ಸೊಳ್ಳೆಗಳಿಂದ ಹರಡುವ ಮಾರಣಾಂತಿಕ ಝಿಕಾ ವೈರಸ್​ ಬಗ್ಗೆ ಇತ್ತೀಚೆಗೆ ಚರ್ಚೆಗಳು ಹೆಚ್ಚಾಗಿವೆ. ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ ಝಿಕಾ ವೈರಸ್​ನ ಮೂಲವನ್ನು ಕೆದಕುತ್ತ ಹೋದರೆ 1952ರಲ್ಲೇ ಈ ವೈರಸ್​ ಕಾಣಿಸಿಕೊಂಡಿತ್ತು ಎಂಬ ಮಾಹಿತಿ ಸಿಗುತ್ತದೆ.

ಸದ್ಯಕ್ಕೆ ಅಮೆರಿಕ, ಬ್ರೆಜಿಲ್​ನಲ್ಲಿ ಹೆಚ್ಚಾಗಿರುವ ಝಿಕಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲವು ಮುನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಪ್ರಮುಖವಾಗಿ ಸೊಳ್ಳೆಗಳಿಂದ ಹರಡುವ ಈ ಝಿಕಾ ವೈರಸ್​ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ. ಗರ್ಭಿಣಿ ಮಹಿಳೆಯಲ್ಲೇನಾದರೂ ಝಿಕಾ ವೈರಸ್​ ಕಾಣಿಸಿಕೊಂಡರೆ ಹುಟ್ಟುವ ಮಗುವಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಝಿಕಾ ವೈರಸ್​ನ ಲಕ್ಷಣಗಳು:

ಡೆಂಗ್ಯು ರೋಗದ ಲಕ್ಷಣಗಳೇ ಝಿಕಾ ವೈರಸ್​ನಿಂದಲೂ ಕಾಣಿಸಿಕೊಳ್ಳುತ್ತದೆ. ಈ ವೈರಸ್​ ಹರಡಿರುವವರ ದೇಹದಲ್ಲಿ ಜಾಂಡಿಸ್​ ರೋಗಿಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಂಪು ಕಣ್ಣು, ಜ್ವರ, ಗಂಟು ನೋವು, ತಲೆನೋವು, ಅಸ್ವಸ್ಥತೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಎಡಿಸ್​ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್​ ಹರಡುತ್ತದೆ. ಈ ವೈರಸ್​ ದೇಹವನ್ನು ಆವರಿಸಿದರೆ ಮೆದುಳಿನ ಆರೋಗ್ಯ ಹದಗೆಟ್ಟು ಜೀವಕ್ಕೇ ಮಾರಕವಾಗಬಹುದು.

ಭಾರತಕ್ಕೂ ಕಾಲಿಟ್ಟಿದೆ:
ಡೆಂಗ್ಯು, ಚಿಕನ್​ಗುನ್ಯಾ, ಮಲೇರಿಯ, ಹಂದಿಜ್ವರದಂತಹ ರೋಗಗಳಿಂದ ತತ್ತರಿಸಿರುವ ಭಾರತಕ್ಕೂ ಕಾಲಿಟ್ಟಿರುವ ಝಿಕಾ ವೈರಸ್ ಜನರಲ್ಲಿ ಆತಂಕ ಸೃಷ್ಟಿಸಿದೆ. ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ 50ಕ್ಕೂ ಹೆಚ್ಚು ಝಿಕಾ ವೈರಸ್​ ಪ್ರಕರಣಗಳು ದಾಖಲಾಗಿದ್ದವು. ಸರಿಯಾದ ಸಮಯದಲ್ಲಿ ರೋಗವನ್ನು ಪತ್ತೆಹಚ್ಚಿ, ಚಿಕಿತ್ಸೆ ಪಡೆದುಕೊಂಡರೆ ಈ ರೋಗದ ದುಷ್ಪರಿಣಾಮದಿಂದ ಪಾರಾಗಬಹುದು.

1947ರಲ್ಲಿ ಉಗಾಂಡದಲ್ಲಿ ಕಾಣಿಸಿಕೊಂಡ ಈ ವೈರಸ್​ಗೆ 1952ರಲ್ಲಿ ಝಿಕಾ ಎಂದು ಹೆಸರಿಡಲಾಯಿತು. 2014ರಲ್ಲಿ ಪೆಸಿಫಿಕ್​ ಸಾಗರದಿಂದ ಫ್ರೆಂಚ್​ ಪಾಲಿನೆಷಿಯದವರೆಗೆ ಹರಡಿತು. ಮೆಕ್ಸಿಕೋ ಮತ್ತು ಸೆಂಟ್ರಲ್ ಅಮೆರಿಕದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡ ನಂತರ 2015ರಿಂದ ಎಲ್ಲ ಕಡೆ ಹರಡಲಾರಂಭಿಸಿತು.

ಝಿಕಾ ಎಂಬ ಹೆಸರು ಬಂದಿದ್ದು ಹೇಗೆ?:
ಈ ವೈರಸ್​ಗೆ ಝಿಕಾ ಎಂಬ ಹೆಸರು ಬಂದಿದ್ದು ಹೇಗೆಂಬ ಬಗ್ಗೆ ನಿಮಗೆ ಕುತೂಹಲ ಇರಬಹುದು. 1947ರಲ್ಲಿ ಪೂರ್ವ ಆಫ್ರಿಕಾದ ಹಳದಿ ಜ್ವರದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದರು.ಆಫ್ರಿಕಾದ ಝಿಕಾ ಎಂಬ ಕಾಡಿನಲ್ಲಿ ರೆಸಸ್​ ಮಕಾವ್​ ಎಂಬ ಜಾತಿಯ ಮಂಗಗಳ ಮೇಲೆ ಅವರು ತಮ್ಮ ಪ್ರಯೋಗ ನಡೆಸುತ್ತಿದ್ದರು. ಈ ಸಂಶೋಧನೆಯ ವೇಳೆ ಅವರಿಗೆ ಹೊಸತೊಂದು ವೈರಸ್​ನ ಬಗ್ಗೆ ತಿಳಿಯಿತು. ನಂತರ ತಾವು ಕಂಡುಹಿಡಿದ ವೈರಸ್​ಗೆ ಝಿಕಾ ವೈರಸ್​ ಎಂದು ಹೆಸರಿಟ್ಟರು.

ಮೊದಲು ಆಫ್ರಿಕಾದಲ್ಲಿ ಮಾರಣಾಂತಿಕವಾಗಿ ಕಾಣಿಸಿಕೊಂಡ ಝಿಕಾ ವೈರಸ್​ ಬಳಿಕ ಜಗತ್ತಿನ ವಿವಿಧ ದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಮೊದಲು ಡೆಂಗ್ಯು ಮತ್ತು ಚಿಕನ್​ಗುನ್ಯಾ ರೀತಿಯಲ್ಲೇ ಈ ರೋಗದ ಲಕ್ಷಣಗಳು ಇದ್ದುದರಿಂದ ವೈದ್ಯರಿಗೆ ಈ ರೋಗವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ, ರಕ್ತಪರೀಕ್ಷೆ ನಡೆಸಿದ ನಂತರ ಅವರ ರಕ್ತದಲ್ಲಿ ಝಿಕಾ ವೈರಸ್​ನ ಆರ್​ಎನ್​ಎ ಅಂಶ ಪತ್ತೆಯಾಯಿತು.

ಪತ್ತೆ ಹಚ್ಚುವುದು ಹೇಗೆ?
ರಕ್ತ, ಮೂತ್ರ, ಸಲೈವಾ ಪರೀಕ್ಷೆ ಮಾಡುವ ಮೂಲಕ ಝಿಕಾ ವೈರಸ್​ ಅನ್ನು ಪತ್ತೆ ಹಚ್ಚಬಹುದು. ಇಲ್ಲಿಯವರೆಗೂ ಝಿಕಾ ವೈರಸ್​ಗೆ ಜಗತ್ತಿನಲ್ಲಿ ಝಿಕಾ ವೈರಸ್​ ತಡೆಗಟ್ಟಲು ಪರಿಣಾಮಕಾರಿಯಾದ ಲಸಿಕೆಯನ್ನು ಕಂಡಿ ಹಿಡಿದಿಲ್ಲ. ಈ ಮಾರಣಾಂತಿಕ ವೈರಸ್ ಭಯ 80ಕ್ಕೂ ಹೆಚ್ಚು ದೇಶಗಳನ್ನು ಆವರಿಸಿಕೊಂಡಿದೆ.

Comments are closed.