
ವಿಜಯಪುರ: ಟಿಪ್ಪು ಸುಲ್ತಾನ ಹಿಂದೂಗಳ ವಿರೋಧಿಯಾಗಿರಲಿಲ್ಲ. ಶಿವಾಜಿ ಕೂಡ ಮುಸ್ಲಿಮರ ವಿರೋಧಿಯಾಗಿರಲಿಲ್ಲ. ಬ್ರಿಟೀಷರು ಇತಿಹಾಸ ತಿರುಚಿದ ಪರಿಣಾಮ ಟಿಪ್ಪು ಸುಲ್ತಾನನ್ನು ಹಿಂದೂಗಳ ವಿರೋಧಿ ಎಂದು ಕೆಲವರು ಮತ ರಾಜಕೀಯಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಹಿರಿಯ ಸಾಹಿತಿ ರಂಜಾನ್ ದರ್ಗಾ ಹೇಳಿದ್ದಾರೆ.
ವಿಜಯಪುರದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಟಿಪ್ಪು ಸುಲ್ತಾನ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ರಾಜಕೀಯ ಸ್ವಾರ್ಥಕ್ಕಾಗಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ಸಲ್ಲದು ಎಂದು ಹೇಳಿದರು.
ಟಿಪ್ಪು ದೀನ, ದಲಿತ, ಹಿಂದೂಗಳ ಏಳಿಗೆಗೆ ಶ್ರಮಿಸಿದವರು. ಶಿವಾಜಿ ಕೇವಲ ಹಿಂದೂಗಳ ದೊರೆಯಾಗಿರಲಿಲ್ಲ. ಶಿವಾಜಿ ಯಾವ ಕಾಲದಲ್ಲಿಯೂ ಮುಸ್ಲಿಮರ ವಿರೋಧಿಯಾಗಿರಲಿಲ್ಲ. ಮುಸ್ಲಿಂ ಯುವಕರು ಶಿವಾಜಿ ಜಯಂತಿ ಆಚರಿಸಬೇಕು. ಟಿಪ್ಪುಗೆ ನೀಡುವ ಗೌರವವನ್ನು ಶಿವಾಜಿಗೂ ನೀಡಬೇಕು. ಶಿವಾಜಿ ತಮ್ಮ ಮನೆಯ ಪಕ್ಕದಲ್ಲಿ ಮಸೀದಿ ನಿರ್ಮಿಸಿದ ಮಹಾನ ವ್ಯಕ್ತಿ. ಅದೇ ರೀತಿ ಶೃಂಗೇರಿಗೆ ರಕ್ಷಣೆ ನೀಡಿದವರು ಟಿಪ್ಪು ಸುಲ್ತಾನ. ರಾಜ್ಯದ 156 ಮಂದಿರದಲ್ಲಿ ಇಂದಿಗೂ ಟಿಪ್ಪು ಹೆಸರುಗಳಲ್ಲಿ ಪ್ರತಿನಿತ್ಯ ಪ್ರಾರ್ತನೆ ನಡೆಯುತ್ತಿದೆ. ಶಿವಾಜಿ ಆಡಳಿತದಲ್ಲಿ 23 ಮುಸ್ಲಿಂ ಅಧಿಕಾರಿಗಳಿದ್ದರು. ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗ ಹೈದರಾಬಾದ್ ನಿಜಾಮರು ಬ್ರಿಟಿಷರ ಪರವಾಗಿದ್ದರು. ಆದರೂ ಟಿಪ್ಪು ಏಕಾಂಗಿಯಾಗಿ ಹೋರಾಟ ನಡೆಸಿದವರು. ಆದರೆ, ಬ್ರಿಟೀಷರು ಇತಿಹಾಸ ತಿರುಚಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕೆಲವರು ಇಂದು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಪ್ರಕಟವಾದ ಪುಸ್ತಕದಲ್ಲಿ ಟಿಪ್ಪು ಸಾಧನೆಯನ್ಮು ಕೊಂಡಾಡಿದ್ದಾರೆ. ಆದರೆ, ಇಂದು ಅವರೇ ಇದನ್ನು ಓಟಿನ ಆಸೆಗಾಗಿ ವಿರೋಧಿಸುತ್ತಿದ್ದಾರೆ. ಹಿಂದೂ-ಮುಸ್ಲಿಮರು ಇಂಥವರಿಂದ ಎಚ್ಚರಿಕೆಯಿಂದ ಇರಬೇಕು. ಟಿಪ್ಪುಗೆ ಮೋಸ ಮಾಡಿದ್ದು ಮೀರ್ ಸಾದಿಕ್, ದಿವಾನ್ ಪೂರ್ಣಯ್ಯ, ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ವೀರ ಮರಣ ಹೊಂದಿದ. ಇದನ್ನು ನೋಡಿದರೆ, ಯುದ್ಧದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ. ಇಲ್ಲಿ ಜಾತಿಗೆ ಜಾತಿಯವರೇ ವೈರಿಗಳಾಗಿರುತ್ತಾರೆ. ಆದರೆ, ಇದನ್ನು ಕೆಲವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ಮುಗ್ದರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಮ್ ಯುವಕರು ಇತಿಹಾಸದ ಬಗ್ಗೆ ಸಾಕಷ್ಟು ತಿಳಿದುಕೊಂಡು ಅದನ್ನು ಇತರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ರಂಜಾನ್ ದರ್ಗಾ ಕರೆ ನೀಡಿದರು.
Comments are closed.