
ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗೈರು ಹಾಜರಾಗಿದ್ದಾರೆ. ಅವರ ಬದಲಿಗೆ ಕಾಂಗ್ರೆಸ್ ನಾಯಕ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಿಸಿದರೆ ದುರಾದೃಷ್ಟ ಬೆನ್ನು ಹತ್ತುತ್ತದೆ ಎಂಬುದನ್ನು ಕುಮಾರಸ್ವಾಮಿ ಕುಟುಂಬದವರು ಬಲವಾಗಿ ನಂಬಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ಅವರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಈಗ ಈ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಟಿಪ್ಪು ಜಯಂತಿ ಶುಭಾಶಯ ಕೋರಿ ಮಾತನಾಡಿರುವ ಕುಮಾರಸ್ವಾಮಿ, ‘ಟಿಪ್ಪು ಸುಲ್ತಾನರ ಆಡಳಿತ ಸುಧಾರಣಾ ಕ್ರಮಗಳು, ಪ್ರಯೋಗಶೀಲತೆಯ ಗುಣಗಳು ಅನುಕರಣೀಯ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ ಅಷ್ಟೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದಿದ್ದಾರೆ.
ಮೂಢನಂಬಿಕೆಯಿಂದ ದೂರ ಇರುವುದಾಗಿ ಹೇಳಿಕೊಂಡಿರುವ ಅವರು, ‘ನಾನು ಮೂಢನಂಬಿಕೆಯ ವಿರೋಧಿ. ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದುದು. ಈ ಕಾರ್ಯಕ್ರಮ ಯಶಸ್ವಿಯಾಗಲಿ’ ಎಂದು ಹಾರೈಸಿದ್ದಾರೆ.
ಟಿಪ್ಪು ಖಡ್ಗವನ್ನು ಕರ್ನಾಟಕಕ್ಕೆ ತಂದ ವಿಜಯ್ ಮಲ್ಯ ಅವರು ಇಂಗ್ಲೆಂಡ್ನಲ್ಲಿ ತಲೆ ಮರೆಸಿಕೊಳ್ಳುವ ಸ್ಥಿತಿ ಬಂದೊದಗಿದೆ. ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಹಾಗಾಗಿ ಟಿಪ್ಪು ಆರಾಧನೆ ಮಾಡಿದವರಿಗೆ ದುರಾದೃಷ್ಟ ಎದುರಾಗುತ್ತದೆ ಎನ್ನುವ ಮಾತಿದೆ. ಇದನ್ನು ಕುಮಾರಸ್ವಾಮಿ ಕೂಡ ನಂಬಿದ್ದಾರೆ ಎನ್ನಲಾಗಿತ್ತು.
Comments are closed.