ಕರಾವಳಿ

ಗಣೇಶೋತ್ಸವ ಆಚರಣೆ ಹೆಸರಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.10 : ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಯುವುಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ ಇವರಿಗೆ ಮನವಿ ಸಲ್ಲಿಸಲಾಯಿತು.

ಲೋಕಮಾನ್ಯ ಬಾಲಗಂಗಾಧರನಾಥ ತಿಲಕರವರು ಲೋಕ ಕಲ್ಯಾಣ, ಧರ್ಮಜಾಗೃತಿ, ಐಕ್ಯತೆ, ರಾಷ್ಟ್ರರಕ್ಷಣೆ, ಪಾಶ್ಚಾತ್ಯರ ಅಂಧಾನುಕರಣೆಯನ್ನು ದೂರ ಮಾಡುವುದು ಮತ್ತು ಸಮಾಜ ಸಹಾಯ ಮಾಡುವುದು ಇವೇ ಮುಂತಾದ ಉದ್ದೇಶವನ್ನು ಸಾಧ್ಯಗೊಳಿಸಲು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಪ್ರಾರಂಭಿಸಿದರು.

ಆದರೆ ಕಾಲವು ಬದಲಾದಂತೆ ಉತ್ಸವದ ಮೂಲ ಸ್ವರೂಪಕ್ಕೆ ಧಕ್ಕೆ ಬರುವ ರೀತಿಯಲ್ಲಿ ಗಣೇಶೋತ್ಸವ ಆಚರಣೆ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ. ಅದರಿಂದಾಗಿ ಸಾರ್ವಜನಿಕರಿಗೂ, ಮಹಿಳೆಯರಿಗೂ, ಮಕ್ಕಳಿಗೂ ಕೂಡ ಅಡಚಣೆ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ.

ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯು ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಜೊತೆ ಸೇರಿ ಆದರ್ಶ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಅಭಿಯಾನವನ್ನು ಮಾಡುತ್ತಿದೆ. ಕರಪತ್ರಗಳು, ಭಿತ್ತಿಪತ್ರಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ.
ಉತ್ಸವಗಳಲ್ಲಿನ ತಪ್ಪು ಕೃತಿಗಳು ದೂರವಾಗಿ, ಆದರ್ಶ ರೀತಿಯಲ್ಲಿ ಉತ್ಸವಗಳು ಆಚರಣೆಯಾಗಬೇಕು, ಸಮಾಜದ ಎಲ್ಲಾ ಘಟಕಗಳು ಸಹಭಾಗಿಯಾಗಬೇಕು ಮತ್ತು ಉತ್ಸವದ ಮುಖ್ಯ ಉದ್ದೇಶವು ಸಫಲವಾಗಬೇಕು ಎನ್ನುವುದು ಹಿಂದೂ ಜನಜಾಗೃತಿ ಸಮಿತಿಯ ಉದ್ದೇಶವಾಗಿದೆ.

ಹಿಂದೂ ಜನಜಾಗೃತಿ ಸಮಿತಿಯ ಈ ಕಾರ್ಯಕ್ಕೆ ಜಿಲ್ಲಾಡಳಿತವು ಸಹಕರಿಸುವ ಮೂಲಕ ಆದರ್ಶ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಸಹಕಾರ ನೀಡಬೇಕಾಗಿ ವಿನಂತಿ ಮತ್ತು ಜಿಲ್ಲಾಧಿಕಾರಿ ಕಛೇರಿಯಿಂದ ಈ ಮುಂದಿನ ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯ ಮನವಿಯಲ್ಲಿ ವಿನಂತಿಸಲಾಗಿದೆ.

ಬೇಡಿಕೆ :

1. ಉತ್ಸವದ ಹೆಸರಿನಲ್ಲಿ ಒತ್ತಾಯಪೂರ್ವಕ ಚಂದಾವಸೂಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು.
2. ನ್ಯಾಯಾಲಯದ ಆಜ್ಞೆಯಂತೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕಗಳ ಉಪಯೋಗವನ್ನು ತಡೆಯುವುದು.
3. ಮೆರವಣಿಗೆಯ ಸಂದರ್ಭದಲ್ಲಿ ಹುಡುಗರು, ಹುಡುಗಿಯರ ಜೊತೆಗೆ ನರ್ತಿಸುವುದು, ವಾಯುಮಾಲಿನ್ಯ ಮಾಡುವ ಧ್ವನಿವರ್ಧಕ (ಡಿ.ಜೆ)ವನ್ನು ಉಪಯೋಗಿಸುವುದು, ಮಾದಕ ದ್ರವ್ಯ, ಮದ್ಯಪಾನ ಸೇವನೆ ಮತ್ತು ಸಮಯ ಮೀರಿ ಮೆರವಣಿಗೆಯನ್ನು ಮಾಡುವುದು ಮುಂತಾದ ಅಹಿತಕರ ಘಟನೆಗಳನ್ನು ತಡೆಯುವುದು.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಭಾಕರ ನಾಯ್ಕ್, ಶ್ರೀ. ಉಪೇಂದ್ರ ಆಚಾರ್ಯ, ಶ್ರೀ. ರಮೇಶ್ ನಾಯಕ್, ಸೌ. ಲೀಲಾವತಿ ನಾಯಕ್, ಸೌ. ವನಿತಾ, ಶ್ರೀ. ರಾಜೇಶ್, ಧರ್ಮಪ್ರೇಮಿಗಳಾದ ಶ್ರೀ. ಸತೀಶ್ ಡಿ., ಶಶಿಧರ್ ಬಾಳಿಗ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಮೊದಲಾದವರು ಚಂದ್ರ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

Comments are closed.