
ಮಂಗಳೂರು,ಸೆಪ್ಟಂಬರ್.10 ; ನಗರದಲ್ಲಿ ಬಂದ್ನಿಂದ ತೊಂದರೆಗೊಳಗಾದ ಜನರಿಗೆ ಆಹಾರ, ಪಾನೀಯದ ವ್ಯವಸ್ಥೆಯನ್ನು ಮಾಡಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮಾನವೀಯತೆಯನ್ನು ಮೆರೆದಿದ್ದಾರೆ.
ಸೋಮವಾರ ಕಾಂಗ್ರೆಸ್ ಕರೆದಿದ್ದ ಬಂದ್ ವಿಫಲವಾಗಿದ್ದರೂ ಬಲವಂತವಾಗಿ ಹೋಟೇಲ್ ಮತ್ತು ಬಸ್ಸುಗಳನ್ನು ನಿಲ್ಲಿಸಿದ್ದ ಕಾರಣ ಸಾಮಾನ್ಯ ಜನರಿಗೆ ತೊಂದರೆಯಾಗಿತ್ತು. ಇದರಿಂದ ಜನರು ಆಹಾರ, ಪಾನೀಯಗಾಗಿ ಸಮಸ್ಯೆ ಅನುಭವಿಸಿದರು. ಇದನ್ನು ಅರಿತ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸುಮಾರು ಒಂದೂವರೆ ಸಾವಿರ ಜನರಿಗಾಗುವಷ್ಟು ಪಲಾವ್ ಮತ್ತು ನೀರಿನ ಬಾಟಲುಗಳನ್ನು ಮಂಗಳೂರು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಹಂಪನಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಸಹಿತ ವಿವಿದೆಡೆ ಜನರಿಗೆ ಹಂಚಿದರು.

ನಂತರ ಈ ಬಗ್ಗೆ ಮಾತನಾಡಿದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಇಡೀ ಜಿಲ್ಲಾಡಳಿತವನ್ನು ದುರುಪಯೋಗ ಮಾಡಿ ಬಂದ್ ಮಾಡಿದೆ. ಹಲವು ಕಡೆ ಹೋಟೇಲುಗಳನ್ನು ಬಲವಂತವಾಗಿ ಕಾಂಗ್ರೆಸ್ಸಿಗರು ಬಂದ್ ಮಾಡಿದ್ದಾರೆ. ಹೋಟೇಲುಗಳಿಗೆ ಕಲ್ಲು ಬಿಸಾಡಿದ್ದಾರೆ. ಇದರಿಂದ ಜನರಿಗೆ ಮಧ್ಯಾಹ್ನದ ಊಟಕ್ಕೂ ತೊಂದರೆಯಾಗಿದೆ. ತೊಂದರೆಗೆ ಒಳಗಾದ ಜನರಿಗೆ ಆಹಾರ ಮತ್ತು ಶುದ್ಧ ನೀರನ್ನು ಒದಗಿಸುವುದು ಶಾಸಕನಾಗಿ ನನ್ನ ಕರ್ತವ್ಯ ಎನಿಸಿ ಜನರಿಗೆ ಸಹಾಯವಾಗುವ ದೃಷ್ಟಿಯಲ್ಲಿ ಆಹಾರ ಮತ್ತು ನೀರನ್ನು ಒದಗಿಸಲಾಗಿದೆ. ಇದರಿಂದ ಒಂದೂವರೆ ಸಾವಿರಷ್ಟು ಜನರಿಗೆ ಉಪಯೋಗವಾಗಿದೆ.
ಕಾಂಗ್ರೆಸ್ಸಿಗರು ಜನರಿಗೆ ತೊಂದರೆ ಮಾಡದೇ ಪ್ರತಿಭಟನೆ ಮಾಡಬೇಕಿತ್ತು. ಆದರೆ ಕಾಂಗ್ರೆಸ್ಸಿಗರ ಬಲವಂತದ ಬಂದ್ ನಿಂದ ಜನರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರ ಬೆಂಬಲದಿಂದ ಆಹಾರ, ಪಾನೀಯ ವಿತರಿಸಲಾಗಿದೆ ಎಂದರು.
ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ದಿವಾಕರ, ವಸಂತ ಜೆ ಪೂಜಾರಿ, ರಾಜೇಶ ಶೆಟ್ಟಿ, ಜಗದೀಶ ಶೆಟ್ಟಿ, ಮಲ್ಲೇಶ, ಮುರಳಿಧರ್ ನಾಯಕ್, ಪಮ್ಮಿ ಕೊಡಿಯಾಲ್ ಬೈಲ್, ಲಲ್ಲೇಶ್ ಕುಮಾರ್, ವಿಜಯ ಬೆನೆಡಿಕ್ಟ್, ರಮೇಶ ಹೆಗ್ಡೆ, ಶರತ್ ಪದವಿನಂಗಡಿ, ಪ್ರಶಾಂತ್ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.