
ಕಟ್ಟುಮಸ್ತಾದ ಶರೀರ, ಸಪೂರದ ಹೊಟ್ಟೆ ಇದು ಆರೋಗ್ಯವಂತರಾಗಿರುವವರ ಲಕ್ಷಣ. ಒಮ್ಮೆ ಹೊಟ್ಟೆ ಬಂದರೆ ಕರಗಿಸುವುದು ಕಷ್ಟ. ಹೊಟ್ಟೆಯ ಕೊಬ್ಬನ್ನು ಕರಗಿಸಲು ವ್ಯಾಯಾಮದ ಜೊತೆ ಹಲವು ಮನೆ ಮದ್ದಿನ ಪಾನೀಯಗಳು ಸಹಕಾರಿಯಾಗಿದೆ. ಇಂತಹ ಪಾನೀಯಗಳ ಸೇವನೆಯಿಂದ ಬೊಜ್ಜು ಕರಗಿಸಬಹುದು.
ಕೇವಲ ಪಾನೀಯದಿಂದ ಮಾತ್ರ ಬೊಜ್ಜು ಕರಗಿಸುವುದಿಲ್ಲ. ಜೊತೆಗೆ ಸಾಕಷ್ಟು ವ್ಯಾಯಾಮ, ಕೊಬ್ಬು ಹೆಚ್ಚಿಸುವ ಆಹಾರಗಳ ವರ್ಜ್ಯ, ಇವುಗಳಿಂದ ಹೊಟ್ಟೆ ಕರಗಿಸಲು ಸಾಧ್ಯ.
ಸೌತೆಜ್ಯೂಸ್ : ಸೌತೆ ಜ್ಯೂಸ್ ಸೇವನೆಯಿಂದ ಹೊಟ್ಟೆಯ ಕೊಬ್ಬು ಕರಗಿಸಲು ಸಾಧ್ಯ. ಒಂದು ಮಧ್ಯಮ ಗಾತ್ರದ ಸೌತೆಕಾಯಿಯ ಸಿಪ್ಪೆ ಸುಲಿದು ದೊಡ್ಡ ತುಂಡುಗಳನ್ನಾಗಿಸಿ ಮಿಕ್ಸಿಯಲ್ಲಿ ನುಣ್ಣಗೆ ಮಾಡಬೇಕು. ಅದಕ್ಕೆ ಲಿಂಬೆಯ ರಸ, ಪುದೀನಾ ಕುದಿಸಿದ್ದ ನೀರು ಬೆರೆಸಿ ಮಿಶ್ರಣ ಮಾಡಿ, ದಿನವಿಡೀ ಕೊಂಚಕೊಂಚ ಕುಡಿಯುತ್ತಿದ್ದರೆ ಹೊಟ್ಟೆ, ಕೊಬ್ಬು ನಿಧಾನವಾಗಿ ಕರಗುತ್ತದೆ.
ಲೋಳೆರಸ: ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಲೋಳೆರಸವು ಉತ್ತಮ ಆಯ್ಕೆಯಾಗಿದೆ. ಇದರ ರಸ ಸಣ್ಣ ಕರುಳನ್ನು ಸ್ವಚ್ಛಗೊಳಿಸುತ್ತದೆ. ಹಾಗೂ ಹೊಟ್ಟೆಯುಬ್ಬರವನ್ನು ತಡೆಯುತ್ತದೆ. ಒಂದು ದೊಡ್ಡ ಲೋಟ ನೀರಿನಲ್ಲಿ ತಲಾ ಎರಡು ದೊಡ್ಡ ಚಮಚ ಲೋಳೆ ರಸ ಮತ್ತು ಜೇನನ್ನು ಬೆರೆಸಿ, ಬೆಳಿಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿದು ನಂತರ ಒಂದು ಗಂಟೆ ನಂತರ ಮಿತ ಉಪಹಾರ ಸೇವಿಸುವುದರಿಂದ ಹೊಟ್ಟೆ ಕೊಬ್ಬು ಕರಗುತ್ತದೆ.
ಬೆಳ್ಳುಳ್ಳಿ-ಲಿಂಬೆ : ಬೆಳ್ಳುಳ್ಳಿ- ಲಿಂಬೆಯ ಜ್ಯೂಸ್ ಸಹ ಹೊಟ್ಟೆ ಕೊಬ್ಬು ಕರಗಿಸಲು ನೆರವಾಗುತ್ತದೆ. ಒಂದು ಕಪ್ ತಣ್ಣನೆ ಅಥವಾ ಉಗುರ ಬೆಚ್ಚಗಿನ ನೀರಿಗೆ ಒಂದು ಚಮಚ ಲಿಂಬೆರಸ ಹಿಂಡಿ, ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿದು- ಲಿಂಬೆರಸ ಹಿಂಡಿದ ನೀರಿನೊಂದಿಗೆ ಬೆಳ್ಳುಳ್ಳಿಯನ್ನು ನುಂಗುವುದನ್ನು ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ನಿಧಾನವಾಗಿ ಸಪೂರವಾಗುತ್ತದೆ.
ಜೀರಿಗೆ : ಹೊಟ್ಟೆ ಕರಗಿಸಲು ಮತ್ತೊದು ಪರ್ಯಾಯ ವಿಧಾನವೆಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ನಂತರ ಜೀರಿಗೆಯನ್ನು ಸೋಸಿ ಬಿಸಿ ಇರುವಾಗಲೇ ಇದನ್ನು ಕುಡಿದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬು ಕರಗುತ್ತದೆ.
ಮೆಂತ್ಯೆ : ಮೆಂತ್ಯೆ ನೀರು ಸಹ ಕೊಬ್ಬು ಕರಗಿಸಲು ದಿವ್ಯೌಷಧ. ರಾತ್ರಿ ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ನೀರನ್ನು ಬಿಸಿ ಮಾಡಿಕೊಂಡು ಕುಡಿದರೆ ಕೊಬ್ಬು ಕರಗುತ್ತದೆ.
ಜೇನುತುಪ್ಪ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಲಿಂಬೆರಸ ಅಥವಾ ಜೇನುತುಪ್ಪ ಸೇರಿಸಿ ಕುಡಿದರೆ ಹೊಟ್ಟೆ ಸುತ್ತಲಿನ ಹಾಗೂ ದೇಹದ ಇತರ ಭಾಗದ ಕೊಬ್ಬು ಕರಗುತ್ತದೆ. ಇನ್ನೇಕೆ ತಡ ಈಗಿನಿಂದಲೇ ಮೇಲಿನ ಯಾವುದಾದರೂ ಪರಿಹಾರ ಬಳಸಿ ಹೊಟ್ಟೆ ಸಪೂರ ಮಾಡಿಕೊಳ್ಳಿ.
Comments are closed.