ಕರ್ನಾಟಕ

ಕಾರು ಬಾಡಿಗೆ ಪಡೆದು ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರ ದರೋಡೆ ಮಾಡುತ್ತಿದ್ದ 7 ಮಂದಿ ಅರೆಸ್ಟ್

Pinterest LinkedIn Tumblr

ಬೆಂಗಳೂರು: ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಮೊಬೈಲ್, ಆಭರಣಗಳನ್ನು ದರೋಡೆ ಮಾಡುತ್ತಿದ್ದ ಏಳು ಮಂದಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಮಧುಸೂದನ್‍ಗೌಡ (22) ಹಾಗೂ ಹರೀಶ್ (20), ಅಭಿಷೇಕ್ (20), ಪ್ರಕಾಶ್ (20), ಪ್ರವೀಣ್ (20), ರಾಹುಲ್ (21) ಮತ್ತು ಕಿಶೋರ್ (18) ಬಂಧಿತ ದರೋಡೆಕೋರರು. ಮಧುಸೂದನ್ ಪ್ರಮುಖ ನಾಯಕನ ಪಾತ್ರ ವಹಿಸಿ ದರೋಡೆಗೆ, ರಾಬರಿ ಮಾಡಲು ಸಹಚರರಿಗೆ ಉತ್ತೇಜನ ನೀಡಿ ಏಳು ಜನರ ಗುಂಪು ಮಾಡಿದ್ದನು.

ಈ ಗುಂಪು ಜೂಮ್ ಕಾರನ್ನು ಆನ್‍ಲೈನ್ ಮೂಲಕ ಬಾಡಿಗೆಗೆ ಪಡೆದು ನಂತರ ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ನಂದಿನಿ ಲೇಔಟ್ ಭಾಗಗಳಲ್ಲಿ ಸಂಚರಿಸುತ್ತ ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು, ವಾಹನ ಸವಾರರನ್ನು ಅಡ್ಡಗಟ್ಟಿ ಹಣ, ಆಭರಣ, ಮೊಬೈಲ್ ದರೋಡೆ ನಡೆಸುತ್ತಿದ್ದರು.

ದರೋಡೆಯಿಂದ ದೋಚಿದ ಹಣವನ್ನು ತಮ್ಮ ದುಂದುವೆಚ್ಚಗಳಿಗೆ ಖರ್ಚು ಮಾಡುತ್ತಿದ್ದರು. ಈ ಗ್ಯಾಂಗ್ ದರೋಡೆ ಮಾಡಿದ್ದ ಮೊಬೈಲ್‍ನಿಂದಲೇ ಜೂಮ್ ಕಾರನ್ನು ಬುಕ್ ಮಾಡುತ್ತಿದ್ದರು. ರಾಜಾಜಿನಗರ ಠಾಣೆ ಪೊಲೀಸರು ಈ ಏಳು ಮಂದಿಯನ್ನು ಬಂಧಿಸಿ 26.84 ಲಕ್ಷ ರೂ. ಬೆಲೆಯ ಎರಡು ಐಷಾರಾಮಿ ಕಾರು, ವಿವಿಧ ಕಂಪೆನಿಯ 7 ಮೊಬೈಲ್‍ಗಳು, ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ರಾಜಾಜಿನಗರ ಠಾಣೆಯ ಒಂದು ದರೋಡೆ ಪ್ರಕರಣ, ಜಾಲಹಳ್ಳಿ ಠಾಣೆಯ ಡಕಾಯಿತಿ ಪ್ರಕರಣ, ಚಂದ್ರಾ ಲೇಔಟ್ ಠಾಣೆಯ ಒಂದು ಡಕಾಯಿತಿ ಪ್ರಕರಣಗಳು ಪತ್ತೆಯಾದಂತಾಗಿವೆ. ಮಲ್ಲೇಶ್ವರಂ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಧನಂಜಯ್ ನೇತೃತ್ವದಲ್ಲಿ ರಾಜಾಜಿನಗರ ಠಾಣೆ ಇನ್ಸ್‍ಪೆಕ್ಟರ್ ರಾಮರೆಡ್ಡಿ ಅವರನ್ನೊಳಗೊಂಡ ತಂಡ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Comments are closed.