ಕರಾವಳಿ

ವಿಧಾನ ಪರಿಷತ್‌ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ : ಭಾರೀ ಮಳೆ ಹಿನ್ನೆಲೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ

Pinterest LinkedIn Tumblr

ಮಂಗಳೂರು, ಜೂನ್.08: ಕರ್ನಾಟಕ ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಗಳ ಚುನಾವಣೆ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಮಳೆ ಹಿನ್ನೆಲೆಯಲ್ಲಿ ಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ದ.ಕ.ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ.ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬಹುದು. ಕರ್ನಾಟಕ ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋದ ಸಂದರ್ಭದಲ್ಲಿ 13 ವಿವಿಧ ಬಗೆಯ ದಾಖಲಾತಿಗಳ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರು ಪಡಿಸಿ ಮತದಾನ ಮಾಡಲು ಅವಕಾಶವಿದೆ.

ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದವರು ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸನ್ಸ್‌, ಕೇಂದ್ರ, ರಾಜ್ಯ ಸರಕಾರದ ಹಾಗೂ ಅರೆ ಸರಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್‌ಯು, ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳು ತಮ್ಮ ಸಿಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, ಬ್ಯಾಂಕ್‌, ಪೋಸ್ಟ್‌ ಆಫೀಸ್‌ ಫೋಟೋವುಳ್ಳ ಪಾಸ್‌ ಬುಕ್‌, ಪಾನ್‌ ಹೊಂದಿರುವ ಕಾರ್ಡ್‌, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌,ಫೋಟೋವುಳ್ಳ ಪಿಂಚಣಿ ದಾಖಲೆ, ಅಂಗವಿಕಲರ ಫೋಟೋ ಇರುವ ಪ್ರಮಾಣ ಪತ್ರ, ಶಸ್ತಾಸ್ತ್ರ ಪರವಾನಿಗೆ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಮುಂತಾದ ಅಧಿಕೃತ ದಾಖಲೆಗಳಲ್ಲಿ ಯಾವುದಾದರೊಂದನ್ನು ಮತಗಟ್ಟೆಯಲ್ಲಿ ಹಾಜರುಪಡಿಸಿ, ಮತದಾನ ಮಾಡಬಹುದಾಗಿದೆ.

ಆದರೆ ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಯ ಪರಿಣಾಮ ಹಾಗೂ ಜಿಲ್ಲೆಯಲ್ಲಿ ಇನ್ನೆರಡು ದಿನ ಗುಡುಗು, ಬಿರುಗಾಳಿ ಸಹಿತಾ ಭಾರೀ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗಳತ್ತ ತೆರಳಲು ಹಿಂದೇಟು ಹಾಕುತ್ತಿರುವ ಕಾರಣ ಜಿಲ್ಲೆಯಲ್ಲಿ ಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶೇಖಡವಾರು ಮತದಾನ :

ಮಧ್ಯಾಹ್ನದವರೆಗೆ ಪದವೀಧರರ ಕ್ಷೇತ್ರದಲ್ಲಿ ಶೇಖಡ 43 ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಶೇಖಡ 36 ಮತದಾನವಾಗಿದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕ್ಯಾ.ಕಾರ್ಣಿಕ್ ಮತದಾನ :

ವಿಧಾನ ಪರಿಷತ್ ನೈರುತ್ಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ತಮ್ಮ ಮತ ಚಲಾಯಿಸಿದರು.

Comments are closed.