
ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆರ್ಎಸ್ಎಸ್ ಮೂಗು ತೂರಿಸುವ ಕೆಲಸ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ ಮತ್ತು ಮುಖ್ಯಸ್ಥ ಭಯ್ಯಾಜಿ ಅವರು ನಾವು ಲಿಂಗಾಯತ ಬೇಡಿಕೆಯನ್ನು ಎಂದು ಹೇಳಿದ್ದಾರೆ. ನಮ್ಮ ಹೋರಾಟ ಹಾಗೂ ಧರ್ಮದ ಬಗ್ಗೆ ಮಾತನಾಡಲು ಅವರ್ಯಾರು? ಅವರು ಈ ರೀತಿ ಹೇಳಿಕೆ ನೀಡಲು ಲಿಂಗಾಯತರಿಗೆ ಅವರಿಗೆ ಏನು ಸಂಬಂಧವಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಿಂಗಾಯತ, ವೀರಶೈವ ಎರಡೂ ಒಂದೇ ಎಂದು ಪ್ರತಿಪಾದಿಸುವ ಯಡಿಯೂರಪ್ಪ ಅವರು ಮಠಾಧೀಶರ ಜತೆ ಬಹಿರಂಗ ವೇದಿಕೆಯಲ್ಲಿ ನಮ್ಮ ಜತೆ ಚರ್ಚಿಸಿ ತಾರ್ಕಿಕ ಅಂತ್ಯ ಪಡೆಯಲು ಮುಂದಾಗಲಿ. ಪ್ರತ್ಯೇಕ ಧರ್ಮದ ಕುರಿತು ನಮ್ಮ ಹೋರಾಟ ಮಾತ್ರ ಸದಾ ಮುಂದುವರಿಯುತ್ತಲೇ ಇರುತ್ತದೆ.
ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ. ಲಿಂಗಾಯತ ಧರ್ಮದಲ್ಲಿ ವೀರಶೈವ ಎನ್ನುವುದು ಒಂದು ಒಳಪಂಗಡ. ಈ ಕುರಿತು ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ಯಡಿಯೂರಪ್ಪನವರು ಲಿಂಗಾಯತ ಎನ್ನುವ ದಾಖಲೆ ನೀಡಿಯೇ ಶಾಸಕ, ಸಚಿವ, ಮುಖ್ಯಮಂತ್ರಿಯಾಗಿದ್ದು ಎನ್ನುವುದು ನೆನಪಿನಲ್ಲಿಡಬೇಕು. ಒಂದು ವೇಳೆ ಎರಡೂ ಒಂದೇ ಎನ್ನುವ ವಾದ ಯಡಿಯೂರಪ್ಪನವರದ್ದಾದರೆ, ಮೊದಲು ತಾವು ವೀರಶೈವರೋ ಅಥವಾ ಲಿಂಗಾಯತರೋ ಎನ್ನುವುದು ಸ್ಪಷ್ಟಪಡಿಸಲಿ. ನಾಗಮೋಹನ ದಾಸ್ ಸಮಿತಿ ವರದಿ ಕಸದಬುಟ್ಟಿಗೆ ಎಸೆಯಿರಿ ಎನ್ನುವ ಜಗದೀಶ್ ತಾವು ಯಾವ ಸಮುದಾಯದಿಂದ ಮುಂದೆ ಬಂದವರು ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
Comments are closed.