
ಬೀದರ್: ಬಸವ ಸೇವಾ ಪ್ರತಿಷ್ಠಾನ ನೀಡುವ ಗುರುಬಸವ ಪುರಸ್ಕಾರಕ್ಕೆ ಖ್ಯಾತ ವಿಜ್ಞಾನಿ, ಆಹಾರ ತಜ್ಞ, ಹೋಮಿಯೋಪತಿ ವೈದ್ಯ ಮೈಸೂರಿನ ಡಾ.ಖಾದರ್ ಹಾಗೂ ವೀರಮಾತೆ ಅಕ್ಕ ನಾಗಲಾಂಬಿಕಾ ಪುರಸ್ಕಾರಕ್ಕೆ ಕಾರ್ಗಿಲ್ ಹೀರೋ ಕ್ಯಾಪ್ಟನ್ ನವೀನ್ ನಾಗಪ್ಪ ಭಾಜನರಾಗಿದ್ದಾರೆ.
ಜ.29ರಿಂದ ಮೂರು ದಿನ ಬಸವಗಿರಿಯಲ್ಲಿ ವಚನ ವಿಜಯೋತ್ಸವ ನಡೆಯಲಿದೆ. 30ರಂದು ಮಧ್ಯಾಹ್ನ 3ಕ್ಕೆ ನಡೆಯುವ ಆಹಾರ ಪದ್ಧತಿ ಮತ್ತು ಜೀವನ ವಿಧಾನ ಗೋಷ್ಠಿಯಲ್ಲಿ ಡಾ.ಖಾದರ್ ಅವರಿಗೆ ಗುರುಬಸವ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 51 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಪ್ರತಿಷ್ಠಾನ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ತಿಳಿಸಿದ್ದಾರೆ.
ಡಾ.ಖಾದರ್ ಲಕ್ಷಾಂತರ ಜನರಿಗೆ ಆರೋಗ್ಯ ಭಾಗ್ಯ ನೀಡುತ್ತಿದ್ದಾರೆ. ಕಿರುಧಾನ್ಯಗಳ ಮಹತ್ವ ಸಾರಿ ಅವುಗಳಿಗೆ ಸಿರಿ ಧಾನ್ಯಗಳೆಂದು ಹೆಸರಿಟ್ಟ ವೈದ್ಯ. ಇವುಗಳ ಬಳಕೆಯಿಂದ ಆರೋಗ್ಯ ಕಾಪಾಡುವ ವಿಧಾನ ತಿಳಿಸಿಕೊಟ್ಟಿದ್ದಾರೆ. ಈ ಮಹತ್ತರ ಸೇವೆ ಮನ್ನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಗಾಂಧಿವಾದಿ ಅಣ್ಣಾ ಹಜಾರೆ, ನರೇಂದ್ರ ದಾಬೋಲ್ಕರ್, ಡಾ.ಶಿವರಾಜ ಪಾಟೀಲ್, ಡಾ.ಆಮ್ಟೆ, ಬಾಲಿವುಡ್ ತಾರೆ ನಾನಾ ಪಾಟೇಕರ್ ಈ ಹಿಂದೆ ಗುರುಬಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೀರ ಮಾತೆ ಅಕ್ಕ ನಾಗಲಾಂಬಿಕಾ ಪುರಸ್ಕಾರ ಹುಬ್ಬಳ್ಳಿ ಮೂಲದ ಕ್ಯಾಪ್ಟನ್ ನವೀನ್ ನಾಗಪ್ಪಗೆ ನೀಡಲಾಗುತ್ತಿದೆ. ಇವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತ ತಮ್ಮ ಕಾಲು ಕಳೆದುಕೊಂಡರೂ ದೇಶದ ಗೆಲುವಿಗಾಗಿ ಶ್ರಮಿಸಿದ ಧೀರ ಯೋಧ. ಈ ಪ್ರಶಸ್ತಿ 21 ಸಾವಿರ ರೂ. ಬಹುಮಾನ ಮತ್ತು ಫಲಕ ಒಳಗೊಂಡಿದೆ. ಜ.29ರಂದು ನಡೆಯುವ ಯುವ ಪ್ರೇರಣಾ ಸಮಾವೇಶದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
Comments are closed.