ರಾಷ್ಟ್ರೀಯ

ಭದ್ರತೆಯಲ್ಲಿ ಪದ್ಮಾವತ್​ ದೇಶಾದ್ಯಂತ ತೆರೆಗೆ ; ಪ್ರೇಕ್ಷಕರ ದಿಲ್ ಖುಷ್, ಗಳಿಕೆಯಲ್ಲೂ ಉತ್ತಮ

Pinterest LinkedIn Tumblr


ನವದೆಹಲಿ / ಮುಂಬಯಿ: ರಜಪೂತ ಸಮುದಾಯದ ನಾನಾ ಸಂಘಟನೆಗಳ ಬೆದರಿಕೆಯ ನಡುವೆಯೂ ಭಾರಿ ಭದ್ರತೆಯೊಂದಿಗೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಸಿನಿಮಾ ಪದ್ಮಾವತ್​ ದೇಶಾದ್ಯಂತ ಗುರುವಾರ ತೆರೆಕಂಡಿದೆ.

ರಜಪೂತ ರಾಣಿ ಪದ್ಮಾವತಿಯ ಇತಿಹಾಸವನ್ನು ತಿರುಚಿ ಆಕೆಯ ಚಾರಿತ್ರ್ಯ ವಧೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರಜಪೂತ ಸಮುದಾಯ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಹೋರಾಟದ ಮುಂಚೂಣಿ ಸಂಘಟನೆ ಕರ್ಣಿ ಸೇನಾ ಎಚ್ಚರಿಸಿತ್ತು.

ಬಿಡುಗಡೆಗೆ ಮುನ್ನಾದಿನವಾದ ಬುಧವಾರ ರಾಜಸ್ಥಾನ, ತೆಲಂಗಾಣ ಸೇರಿ ನಾನಾ ಕಡೆ ಸಮುದಾಯದ ಗುಂಪುಗಳು ಬಸ್​ಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ನಡೆಸಿದ್ದವು.

ಉತ್ತಮ ಗಳಿಕೆ:

ಆರಂಭದ ಗಳಿಕೆ ಉತ್ತಮವಾಗಿದೆ ಎನ್ನಲಾಗಿದ್ದು, ದೆಹಲಿಯಲ್ಲ ಬೆಳಗ್ಗೆ 9 ಗಂಟೆ ಆಟಕ್ಕೆ ಶೇ.60 ರಿಂದ 70ರಷ್ಟು ಸೀಟುಗಳು ಭರ್ತಿಯಾಗಿದ್ದವು. ಮುಂಬಯಿಯಲ್ಲಿ ಶೇ. 40ರಿಂದ 45ರಷ್ಟು ಟಿಕೆಟ್​ ಬಿಕರಿಯಾಗಿದ್ದವು. ನಂತರ ಮತ್ತು ರಾತ್ರಿಯ ಷೋಗಳು ಮುಂಗಡ ಬುಕಿಂಗ್ ಆಗಿದ್ದವು.

ಭಾರತೀಯ ಸಿನಿಮಾ ಮಾಲೀಕರ ಮತ್ತು ಪ್ರದರ್ಶಕರ ಸಂಘದ ಸದಸ್ಯ, ಮುಂಬಯಿ ಮೂಲದ ನಿತಿನ್ ದಾತಾರ್ ಮಾತನಾಡಿ, ಈ ವರೆಗೆ ಸಿನಿಮಾ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಇದೆ. ಮುಂದೆ ಹೆಚ್ಚು ಜನರನ್ನು ಸಿನಿಮಾ ಆಕರ್ಷಿಸಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ಗುರುಗಾಂವ್​ನಲ್ಲಿ ನಿನ್ನೆ ಶಾಲಾ ಬಸ್ ಮೇಲೆ ಕಲ್ಲು ತೂರಾಟ ಸೇರಿದಂತೆ ಕೆಲವು ವಾರಗಳಲ್ಲಿ ಸಿನಿಮಾ ಬಿಡುಗಡೆ ವಿರೋಧಿಸಿ ನಡೆದ ಹಿಂಸಾಚಾರವನ್ನು ಸಿನಿಮಾ ನೋಡಿ ಬಂದ ಬಹುತೇಕ ವೀಕ್ಷಕರು ಖಂಡಿಸಿದ್ದಾರೆ. ಸಿನಿಮಾದಲ್ಲಿ ಆಕ್ಷೇಪಾರ್ಹವಾದುದ್ದೇನೂ ಇಲ್ಲ. ಪಶ್ಚಿಮ ದೆಹಲಿಯ ಸತ್ಯಂ ಸಿನಿಪ್ಲೆಕ್ಸ್ ಸೇರಿದಂತೆ ಕೆಲವು ಸಿನಿಮಾ ಮಂದಿರಗಳ ಮುಂದಿನ ಸಾಲಿನಲ್ಲಿ ಸಮವಸ್ತ್ರದ ಭದ್ರತಾ ಸಿಬ್ಬಂದಿ ಆಸೀನರಾಗಿದ್ದರು. ಅಲ್ಲದೆ, ಬೌನ್ಸರ್​ಗಳನ್ನು ಹೊಂದಿದ್ದವು.

ಹದಿನಾರನೇ ಶತಮಾನದ ಕವಿ ಮಲಿಕ್​ ಮೊಹಮ್ಮದ್ ಜಯಸಿಯ ಪದ್ಮಾವತ್​ ಕಾವ್ಯವನ್ನು ಆಧರಿಸಿ 150 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಿಸಲಾಗಿದೆ. ಈ ಐತಿಹಾಸಿಕ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರವನ್ನು ಮಾಡಿದ್ದರೆ, ಶಾಹಿದ್ ಕಪೂರ್- ಮಹಾ ರಾವಲ್ ರತನ್ ಸಿಂಗ್ ಮತ್ತು ರಣವೀರ್ ಸಿಂಗ್ – ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Comments are closed.