
ಮಡಿಕೇರಿ: ಭಾವಚಿತ್ರವಿರುವ ಮತದಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ಅಥವಾ ಆಕ್ಷೇಪಣೆ ಸಲ್ಲಿಸುವುದಿದ್ದಲ್ಲಿ ಅದಕ್ಕಾಗಿ ಜ.22 ರವರೆಗೆ ಕಾಲಾವಕಾಶವನ್ನು ಕೇಂದ್ರ ಚುನಾವಣಾ ಆಯೋಗ ನೀಡಿದ್ದು ಮತದಾರರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿ.ಐ.ಶ್ರೀವಿದ್ಯಾ, ಜ.22ರ ತನಕ ಬೂತ್ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಿದ್ದರೂ ನಾಗರಿಕರು ಆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ಜ.1, 2018ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗದೇ ವಂಚಿತರಾಗಿದ್ದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ , ಮತದಾರರ ನೋಂದಣಾಧಿಕಾರಿ ಕಚೇರಿಗೆ ಮತ್ತು ಆಪ್ತ ಸಹಾಯಕ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಮತದಾರರು ಮೃತರಾಗಿದ್ದಲ್ಲಿ, ಸ್ಥಳಾಂತರಗೊಂಡಿದ್ದಲ್ಲಿ, ಪುನರಾವರ್ತನೆ ಆಗಿದ್ದಲ್ಲಿ ಆ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಅರ್ಜಿ ಸಲ್ಲಿಸುವಂತೆ ಕೋರಿದರು. ಮಾತ್ರವಲ್ಲದೇ ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ನಮೂನೆ -8 ರಲ್ಲಿ ಅರ್ಜಿ ಸಲ್ಲಿಸಬಹುದು.
ಒಂದು ವಿಧಾನಸಭಾ ಕ್ಷೇತ್ರ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ವರ್ಗಾವಣೆ ಮಾಡಬೇಕಾದಲ್ಲಿ ನಮೂನೆ-8 ಎ ಅರ್ಜಿಯನ್ನು ಸಲ್ಲಿಸಬಹುದು. ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಾದರೆ ನಮೂನೆ-6ಎ ಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು ಆ ಆ್ಯಪ್ ಬಳಸಿ ಪರಿಶೀಲಿಸಿಕೊಳ್ಳಬಹುದು. ಮುಖ್ಯ ಚುನಾವಣಾಧಿಕಾರಿ ಕರ್ನಾಟಕ ಇವರ ವೆಬ್ಸೈಟಿನಲ್ಲಿ ಮತದಾರರು ತಮ್ಮ ಹೆಸರು ಇರುವ ಬಗ್ಗೆ ದೃಢಪಡಿಸಿಕೊಳ್ಳಬಹುದು.
9731979899 ಸಂಖ್ಯೆ ಕೆಎಇಪಿಐಸಿ ಎಂದು ಟೈಪ್ ಮಾಡಿದಾಗ ಮತದಾರರ ಗುರುತಿನ ಚೀಟಿಯ ನಂಬರ್ ಟೈಪ್ ಮಾಡಿ ಎಸ್ಎಂಎಸ್ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಮಾಹಿತಿ ಪಡೆಯಬಹುದು. ಮತದಾರರ ಚುನಾವಣಾ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂಬುದನ್ನು ಪ್ರತಿಯೊಬ್ಬರೂ ದೃಢಪಡಿಸಿಕೊಳ್ಳುವಂತೆ ಸಲಹೆಯನ್ನಿತ್ತರು. ಒಂದು ವೇಳೆ ಹೆಸರಿಲ್ಲ ಎಂದಾದರೆ ನಮೂನೆ-6 ರಲ್ಲಿ ಅರ್ಜಿಯನ್ನು ಜ. 22 ರೊಳಗೆ ತಮ್ಮ ಬೂತ್ ಮಟ್ಟದ ಅಧಿಕಾರಿಗಳಿಗೆ ತಾಲೂಕು ಕಚೇರಿಗಳಿಗೆ ನೀಡಿ ಸೇರ್ಪಡಿಸಿಕೊಳ್ಳುವಂತೆ ಶ್ರೀವಿದ್ಯಾ ವಿನಂತಿಸಿದರು.
Comments are closed.