ಕರ್ನಾಟಕ

ವಿಧಾನಸಭೆ ಚುನಾವಣೆಗೆ ಇಂದಿರಾ ವಸ್ತ್ರ ಭಾಗ್ಯ ಯೋಜನೆ

Pinterest LinkedIn Tumblr


ಬೆಂಗಳೂರು: ಅಧಿಕಾರಕ್ಕೆ ಬಂದಾಗಿನಿಂದ ಭಾಗ್ಯಗಳ ಮೂಲಕ ಯೋಜನೆಗಳನ್ನು ನೀಡುತ್ತ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈಗ ಚುನಾವಣೆ ಹೊಸ್ತಿಲಲ್ಲಿ ಮತ್ತೂಂದು ಭಾಗ್ಯ ನೀಡಲು ಚಿಂತನೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಈಗಾಗಲೇ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್‌, ಕ್ಲಿನಿಕ್‌ ತೆರೆದಿರುವ ಸರ್ಕಾರ ಈಗ ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ ಉಚಿತವಾಗಿ ಪುರುಷರಿಗೆ ಒಂದು ಪಂಚೆ ಮತ್ತು ಶರ್ಟ್‌ ಬಟ್ಟೆ ಹಾಗೂ ಮಹಿಳೆಯರಿಗೆ ಒಂದು ಸೀರೆ ಮತ್ತು ರವಿಕೆ ಬಟ್ಟೆಯನ್ನು ಉಚಿತವಾಗಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯನ್ನು 2018-19 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಯೋಗದೊಂದಿಗೆ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಮೂಲಕ ಯೋಜನೆ ಜಾರಿಗೆ ಯೋಚಿಸಲಾಗಿದೆ. ಚುನಾವಣೆಗೂ ಮುಂಚೆಯೇ ಯೋಜನೆ ಜಾರಿಗೊಳಿಸಲು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ್‌ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಚಿವರು ಎಸಿಎಸ್‌ಗೆ ಬರೆದ ಪತ್ರ ಉದಯವಾಣಿಗೆ ಲಭ್ಯವಾಗಿದೆ.

ಪುರುಷರಿಗೆ ಎರಡು ಮೀಟರ್‌ನ ಒಂದು ಪಾಲಿ ಹತ್ತಿ ಪಂಚೆಗೆ 150 ರೂಪಾಯಿ, 2 ಮೀಟರ್‌ ಪಾಲಿವಿಸ್ಕೋಸ್‌ ಶರ್ಟ್‌ ಬಟ್ಟೆಗೆ 100 ರೂಪಾಯಿ, ಮಹಿಳೆಯರಿಗೆ 5.5 ಮೀಟರ್‌ ಪಾಲಿಯೇಸ್ಟರ್‌ ಸೀರೆಗೆ 200 ರೂಪಾಯಿ, 80 ಸೆಂಟಿ ಮೀಟರ್‌ ಪಾಲಿ ಹತ್ತಿ ರವಿಕೆ ಬಟ್ಟೆಗೆ 50 ರೂಪಾಯಿ ದರ ಲೆಕ್ಕಾಚಾರ ಹಾಕಿದ್ದು, ಒಂದು ಕುಟುಂಬಕ್ಕೆ 500 ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ 550 ಕೋಟಿ ರೂಪಾಯಿ ಅಗತ್ಯವಿದ್ದು, ಆ ಅನುದಾನವನ್ನು 2018-19 ಬಜೆಟ್‌ನಲ್ಲಿ ಘೋಷಿಸಿ, ಹಣ ಒದಗಿಸಲು ಸಚಿವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ನೇಕಾರರಿಗೆ ಅನುಕೂಲ: ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ತರುವುದರಿಂದ ರಾಜ್ಯದಲ್ಲಿನ ನೇಕಾರರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ರಾಜ್ಯದಲ್ಲಿ 1.50 ಲಕ್ಷ ವಿದ್ಯುತ್‌ ಮಗ್ಗಗಳಿವೆ. ಅಲ್ಲದೇ 25 ಸಾವಿರ ಅಸಂಘಟಿತ ವಲಯದ ನೇಕಾರರ ಕುಟುಂಬಗಳಿವೆ. ಇಂದಿರಾ ವಸ್ತ್ರ ಭಾಗ್ಯ ಯೋಜನೆಯಿಂದ ನೇಕಾರರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎನ್ನುವುದು ಕೂಡ ಸರ್ಕಾರದ ಲೆಕ್ಕಾಚಾರ.

ಬಡ ಕುಟುಂಬಗಳೇ ಟಾರ್ಗೆಟ್‌: ರಾಜ್ಯದಲ್ಲಿ ಸರ್ಕಾರದ ಲೆಕ್ಕಾಚಾರದಲ್ಲಿ ಸಧ್ಯ 1 ಕೋಟಿ 10 ಲಕ್ಷ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿವೆ. ಪ್ರತಿ ಕುಟುಂಬದ ಗಂಡ ಹೆಂಡತಿ ಲೆಕ್ಕ ಹಾಕಿದರೆ 2 ಕೋಟಿ 20 ಲಕ್ಷ ಫ‌ಲಾನುಭವಿಗಳಾಗುತ್ತಾರೆ.

ಎರಡು ವರ್ಷದಿಂದಲೇ ಪ್ಲಾನ್‌: ಬಾಬುರಾವ್‌ ಚಿಂಚನಸೂರು ಜವಳಿ ಖಾತೆ ಸಚಿವರಾಗಿದ್ದಾಗಲೇ ವಸ್ತ್ರಭಾಗ್ಯ ಯೋಜನೆ ಜಾರಿಗೆ ತರುವ ಕುರಿತು ಆಲೋಚನೆ ಮಾಡಿದ್ದರು. 15-16 ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಸೇರಿಸಲು ಪ್ರಯತ್ನ ನಡೆಸಿದ್ದರು ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆ ಜಾರಿಗೆ ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಆದರೆ, ಈಗ ಚುನಾವಣೆ ವರ್ಷವಾಗಿರುವುದರಿಂದ ನೇರವಾಗಿ ಮತದಾರರಿಗೆ ಯೋಜನೆ ತಲುಪುವುದರಿಂದ ಚುನಾವಣೆಗೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆ ಇದೆ. ಹಿಂದೆ ದೇವರಾಜ್‌ ಅರಸು ಮುಖ್ಯಮಂತ್ರಿಯಾಗಿದ್ದಾಗ ಸೀರೆ, ಪಂಚೆ, ಸ್ಟೀಲ್‌ ಊಟದ ತಟ್ಟೆ ವಿತರಿಸಿದ್ದರು. ಅದು ಅವರಿಗೆ ಸಾಕಷ್ಟು ಜನಪ್ರೀಯತೆ ತಂದು ಕೊಟ್ಟಿತ್ತು.

ಭಾಗ್ಯಗಳ ಸರಣಿಯನ್ನೇ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಚುನಾವಣೆ ಹೊಸ್ತಿಲಲ್ಲಿರುವುದರಿಂದ ಮತದಾರರ ಸೆಳೆಯಲು ಮತ್ತೂಂದು ಭಾಗ್ಯ ಘೋಷಿಸುವುದರಲ್ಲಿ ಅನುಮಾನವಿಲ್ಲ.

ಪುರುಷರಿಗೆ ಮಹಿಳೆಯರಿಗೆ
ಪಂಚೆ 150 ಸೀರೆ 200
ಶರ್ಟ್‌ 100 ರವಿಕೆ 50
ಒಟ್ಟು 250 250

ವಸ್ತ್ರಭಾಗ್ಯ ಯೋಜನೆಯನ್ನು ಬಜೆಟ್‌ನಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಿದ್ದೇನೆ. ಬಡವರಿಗೆ ಸೀರೆ ಪಂಚೆ ಕೊಡುವುದರಿಂದ ಅವರಿಗೂ ಅನುಕೂಲ ಆಗುತ್ತದೆ. ನೇಕಾರರಿಗೂ ಉದ್ಯೋಗ ದೊರೆತಂತಾಗುತ್ತದೆ. ಮುಖ್ಯಮಂತ್ರಿಯವರ ಮನವೊಲಿಸಿ ಈ ಯೋಜನೆಯನ್ನು ಜಾರಿಗೆ ತರುತ್ತೇವೆ. ಬಡವರಿಗೆ ಒಂದು ಒಳ್ಳೆ ಕೆಲಸ ಮಾಡಿದಂತಾಗುತ್ತದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಇದು ಅನುಕೂಲ ಆಗುತ್ತದೆ.
– ರುದ್ರಪ್ಪ ಲಮಾಣಿ, ಜವಳಿ ಸಚಿವ.

– ಶಂಕರ್‌ ಪಾಗೋಜಿ

-ಉದಯವಾಣಿ

Comments are closed.