
ಮಂಗಳೂರು, ಜನವರಿ.7: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ಹತ್ಯೆ ನಡೆದ ಬಳಿಕ ನಗರದ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕಳೆದ ನಾಲ್ಕು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಮೃತಪಟ್ಟ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ (47) ಅವರ ಅಂತ್ಯ ಕ್ರಿಯೆಯು ಇಂದು ಸಂಜೆ 7 ಗಂಟೆಯ ಬಳಿಕ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರೆದ ಸಾವಿರಾರು ಮಂದಿ ಸಾರ್ವಜನಿಕರ ಸಮುಖದಲ್ಲಿ ನೆರವೇರಿತು.

ಮಧ್ಯಾಹ್ನ ಸುಮಾರು 2 ಗಂಟೆಗೆ ಆಕಾಶಭವನಕ್ಕೆ ಬಶೀರ್ ಅವರ ಮೃತ ದೇಹ ತಲುಪಿತ್ತು. ಅಂತಿಮ ದರ್ಶನ ಪಡೆಯಲು ಬಶೀರ್ ನಿವಾಸದಲ್ಲಿ ಸಾವಿರಾರು ಮಂದಿ ಸೇರಿದ್ದರು. ಮಹಿಳೆಯವರು ಸಹಿತ ಸಾರ್ವಜನಿಕರಿಗೆ ಮೃತರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು. ಕುಟುಂಬಸ್ಥರು, ಸ್ಥಳೀಯರು ಹಾಗೂ ಸಾರ್ವಜನಿಕರು ಬಶೀರ್ ಅವರ ಅಂತಿಮ ದರ್ಶನ ಪಡೆದ ಬಳಿಕ ವಾಹನದ ಮೂಲಕ ಕೆಲವು ಕಿ.ಮೀ. ದೂರದ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಸುಮಾರು 4 ಗಂಟೆ ಹೊತ್ತಿಗೆ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಗೆ ತಲುಪಿದ ಬಶೀರ್ ಅವರ ಮೃತದೇಹವು ಅಲ್ಲಿ ನೆರೆದ ಸಾವಿರಾರು ಮಂದಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು.

ಬಶೀರ್ ಅವರ ಎರಡನೇ ಪುತ್ರ ಇರ್ಷಾನ್ ಅವರ ವಿದೇಶದಿಂದ ಹೊರಟಿದ್ದು, ಅವರ ಆಗಮನಕ್ಕಾಗಿ ಕಾಯಲಾಗಿತ್ತು. ಸಂಜೆ ಸುಮಾರು 6 ಗಂಟೆ ಹೊತ್ತಿಗೆ ಇರ್ಷಾನ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ನೇರವಾಗಿ ಅವರನ್ನು ಅವರ ತಂದೆ ಮೃತ ಶರೀರ ಇರುವ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಗೆ ಕರೆ ತರಲಾಗಿತ್ತು. ಅಲ್ಲಿ ಇರ್ಷಾನ್ ತಂದೆಯ ಅಂತಿಮ ದರ್ಶನ ಪಡೆದರು. ಮಗ್ರಿಬ್ ನಮಾಝ್ ನೆರವೇರಿಸಿದ ಬಳಿಕ ಸಂಜೆ 7 ಗಂಟೆಯ ಬಳಿಕ ಬಶೀರ್ ಅವರ ಮೃತ ಶರೀರವನ್ನು ಖಬರಸ್ತಾನಕ್ಕೆ ಕೊಂಡೊಯ್ದು ಅಂತ್ಯ ಕ್ರಿಯೆ ನೆವರೇರಿಸಲಾಯಿತು. ಈ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ವಿದೇಶದಿಂದ ಆಗಮಿಸಿ ಬಶೀರ್ ಅವರ ಹಿರಿಯ ಪುತ್ರ ಇಮ್ರಾನ್, ಎರಡನೆಯ ಪುತ್ರ ಇರ್ಷಾನ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಜನವರಿ 3ರಂದು ಹಲ್ಲೆ : 7ರಂದು ಮೃತ್ಯು
ಜ. 3ರಂದು ರಾತ್ರಿ 9:30ರ ಸುಮಾರಿಗೆ ಕೊಟ್ಟಾರ ಚೌಕಿ ಬಳಿಯಿರುವ ತನ್ನ ಫಾಸ್ಟ್ಫುಡ್ ಹೋಟೆಲ್ನಲ್ಲಿದ್ದ ಸಂದರ್ಭ ಬಶೀರ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಇದರಿಂದ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬಶೀರ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲ್ಲೆಯಿಂದಾಗಿ ಅವರ ತಲೆ, ಎದೆಗೆ ಗಂಭೀರ ಗಾಯಗಳಾಗಿದ್ದವು. ಅವರ ಕಿಡ್ನಿ ವೈಫಲ್ಯಗೊಂಡಿತ್ತು. ಸತತ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ತೀವ್ರ ರಕ್ತಸ್ರಾವದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೆ ರವಿವಾರ ಬೆಳಗ್ಗೆ 8:10ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕಾಟಿಪಳ್ಳದಲ್ಲಿ ಜ.3ರಂದು ಮಧ್ಯಾಹ್ನ ದೀಪಕ್ ರಾವ್ ಹತ್ಯೆ ನಡೆದ ದಿನದಂದೇ ರಾತ್ರಿ ಬಶೀರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳು ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದರು.
Comments are closed.