
ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಕೂಗಳತೆಯ ದೂರದ ಜನನಿಬಿಡ ಪ್ರದೇಶಗಳಲ್ಲಿ ಇಂದಿಗೂ ಬಯಲು ಬಹಿರ್ದೆಸೆ ಸಮಸ್ಯೆ ಜೀವಂತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ “ಸ್ಮಾರ್ಟ್ ಸಿಟಿ’ ಪಟ್ಟಿಯಲ್ಲಿರುವ ಬೆಂಗಳೂರಿನ ಹೃದಯ ಭಾಗದ ಪ್ರದೇಶಗಳಲ್ಲೇ ರೈಲ್ವೆ ಹಳಿ, ರಾಜಕಾಲುವೆ, ಖಾಲಿ ನಿವೇಶನ, ರಸ್ತೆ ಬದಿ ಬಯಲು ಬಹಿರ್ದೆಸೆಗೆ ಈವರೆಗೆ ಕಡಿವಾಣ ಬಿದ್ದಿಲ್ಲ!
ನಗರದ 109 ವಾರ್ಡ್‌ಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಪ್ರಕ್ರಿಯೆಗೆ ಈಗಷ್ಟೇ ಬಿಬಿಎಂಪಿ ಚಾಲನೆ ನೀಡಿದೆ. ಇದರಿಂದಾಗಿ ರಾಜಧಾನಿಯ ಒಂದೂ ವಾರ್ಡ್ ಅಧಿಕೃತವಾಗಿ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ ಎಂಬುದು ಸ್ಪಷ್ಟ. ಇನ್ನೊಂದೆಡೆ 109 ವಾರ್ಡ್‌ಗಳ ದೃಢೀಕರಣಕ್ಕಷ್ಟೇ ಪ್ರಸ್ತಾವ ಸಿದ್ಧಪಡಿಸುತ್ತಿರುವುದರಿಂದ ಉಳಿದ 89 ವಾರ್ಡ್‌ಗಳಲ್ಲಿ ಬಯಲು ಬಹಿರ್ದೆಸೆ ಮುಂದುವರಿದಿದೆ ಎಂದು ಪಾಲಿಕೆ ಒಪ್ಪಿಕೊಂಡಂತಾಗಿದೆ.
ಸ್ವತ್ಛ ಭಾರತ ಅಭಿಯಾನದಡಿಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರಕ ಸ್ಪಂದನೆ ಸಿಕ್ಕಿಲ್ಲ. ವಲಸಿಗರು, ಕಟ್ಟಡ ಕಾರ್ಮಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಮುಂದುವರಿದಿದ್ದು, ವಿಧಾನಸೌಧದಿಂದ ಒಂದೆರಡು ಕಿಲೋ ಮೀಟರ್ ವ್ಯಾಪ್ತಿಯ ಗಾಂಧಿನಗರ, ಸುಭಾಷ್ ನಗರ, ವಸಂತನಗರ, ಕಲಾಸಿಪಾಳ್ಯ ಸೇರಿ ನಗರದ ಹಲವೆಡೆ ಇಂದಿಗೂ ಬಯಲು ಬಹಿರ್ದೆಸೆ ಮುಂದುವರಿದಿರುವುದು ರಾಜಧಾನಿಗೆ ಕಳಂಕ ತಂದಿದೆ.
ಬಯಲು ಬಹಿರ್ದೆಸೆಗೆ ಕಾರಣ
ಕೊಳೆಗೇರಿಗಳನ್ನು ಹೊರತುಪಡಿಸಿ ನಗರದ ಪ್ರತಿ ಮನೆಯಲ್ಲಿಯೂ ಶೌಚಾಲಯವಿರುತ್ತದೆ. ಆದರೆ, ನಗರದ ಕೇಂದ್ರ ಹಾಗೂ ಹೊರವಲಯದಲ್ಲಿ ವಲಸಿಗರು, ಕಟ್ಟಡ ನಿರ್ಮಾಣ ಕಾರ್ಮಿಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆ ಮುಂದುವರಿದಿದೆ. ಪಾಲಿಕೆಯಿಂದ ಹಲವು ಭಾಗಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿದರೂ, ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಜನರು ಬಳಸದಿರುವುದು ಕಂಡುಬಂದಿದೆ. ಜತೆಗೆ ನಗರದ ಕೇಂದ್ರ ಭಾಗದಲ್ಲಿ ಪುರುಷರು ಹಾಗೂ ಮಕ್ಕಳೇ ಹೆಚ್ಚು ಬಯಲು ಬಹಿರ್ದೆಸೆಯಲ್ಲಿ ತೊಡಗುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಒಂದೂ ವಾರ್ಡ್ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ
ಕೇಂದ್ರ ನಗರಾಭಿವೃದ್ಧಿ ಇಲಾಖೆ ಸ್ವತ್ಛತೆ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ ನೀಡುವ ಸ್ವತ್ಛ ಸರ್ವೇಕ್ಷಣ್ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆಯಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಆದರೆ, ಪಾಲಿಕೆಯ 198 ವಾರ್ಡ್‌ಗಳ ಪೈಕಿ ಈವರೆಗೆ ಒಂದೂ ವಾರ್ಡ್ ಸಹ ಅಧಿಕೃತವಾಗಿ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಸರ್ವೆಕ್ಷಣ್‌ನಲ್ಲಿ ಶೌಚಾಲಯಗಳಿಗೂ ಅಂಕ ನೀಡುವುದರಿಂದ ಪಾಲಿಕೆಯ ಅಧಿಕಾರಿಗಳು ಬಯಲು ಬಹಿರ್ದೆಸೆ ಮುಕ್ತ ವಾರ್ಡ್‌ಗಳ ಮಾಹಿತಿ ಕಲೆಹಾಕುತ್ತಿದ್ದು, ಇದೀಗ 109 ವಾರ್ಡ್‌ಗಳು ಬಯಲು ಬಹಿರ್ದೆಸೆ ಮುಕ್ತ ವಾರ್ಡ್ ಎಂದು ಘೋಷಿಸುವಂತೆ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ 89 ವಾರ್ಡ್‌ಗಳಿಂದ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಜತೆಗೆ 109 ವಾರ್ಡ್‌ಗಳೂ ನಿಯಮಾವಳಿಯಂತೆ ಪ್ರಸ್ತಾವನೆ ಸಲ್ಲಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಲಸಿಗರು, ಕಟ್ಟಡ ಕಾರ್ಮಿಕರು, ಅದರಲ್ಲಿಯೂ ಪುರುಷರು ಹೆಚ್ಚಾಗಿ ಬಯಲು ಬಹಿರ್ದೆಸೆಗೆ ಮುಂದಾಗುತ್ತಾರೆ. ಕಟ್ಟಡ ಕಾರ್ಮಿಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಬಿಲ್ಡರ್‌ಗಳಿಗೆ ಸೂಚಿಸಲಾಗಿದ್ದು, ಕೊಳೆಗೇರಿ ಪ್ರದೇಶಗಳಲ್ಲಿ ಸಮಯದಾಯ ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ.
– ಸಫ್ರಾìಜ್ ಖಾನ್, ಬಿಬಿಎಂಪಿ ಆರೋಗ್ಯ ವಿಭಾಗದ ಜಂಟಿ ಆಯುಕ್ತ
ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಿಕೊಳ್ಳದ ಪ್ರಮುಖ ವಾರ್ಡ್‌ಗಳು ಗಾಂಧಿನಗರ, ಸುಭಾಷ್ ನಗರ, ಜೆ.ಸಿ.ನಗರ, ವಸಂತನಗರ, ಹೆಬ್ಟಾಳ, ಎಚ್‌ಎಸ್‌ಆರ್ ಬಡಾವಣೆ, ಬೊಮ್ಮನಹಳ್ಳಿ, ಗರುಡಾಚಾರ ಪಾಳ್ಯ, ನಂದಿನಿ ಬಡಾವಣೆ, ಶಂಕರಮಠ, ಮಾರುತಿ ಮಂದಿರ, ಜಾಲಹಳ್ಳಿ, ನಾಗರಬಾವಿ, ನಾಯಂಡಹಳ್ಳಿ.ದಾಸರಹಳ್ಳಿ (12) ಹಾಗೂ ಯಲಹಂಕ ವಲಯಗಳ (16) ಒಂದೂ ವಾರ್ಡ್‌ನಿಂದ ಪ್ರಸ್ತಾವನೆ ಬಂದಿಲ್ಲ
-ವೆಂ. ಸುನೀಲ್ ಕುಮಾರ್
-ಉದಯವಾಣಿ
Comments are closed.