
ಹಾಪುರ್ (ಉ.ಪ್ರ): ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುವುದು ಒಂದು ಮಹತ್ವದ ಘಟ್ಟ. ಈ ಒಂದು ಸವಿ ಘಳಿಗೆ ಸದಾ ನೆನಪಲ್ಲಿ ಉಳಿಯುವಂತಿರಬೇಕು ಎನ್ನುವುದು ಹಲವರ ಕನಸಾಗಿರುತ್ತದೆ. ಇಲ್ಲೊಬ್ಬ ಮಧುಮಗ ಹೆಲಿಕಾಪ್ಟರ್ ಏರಿ ಮದುವೆ ಮಂಟಪಕ್ಕೆ ಬಂದು, ಅದೇ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಮನೆಗೆ ಕರೆದೊಯ್ದಿದ್ದಾನೆ.
ಸಾಮಾನ್ಯವಾಗಿ ಮದುವೆ ವೇಳೆ ಮಧುಮಗ ಬೈಕ್, ಕುದುರೆ ಅಥವಾ ಕಾರ್ ಏರಿ ಬರುತ್ತಾನೆ. ಆದರೆ ಜೈಪುರ ಮೂಲದ ಶಾರುಖ್ ಖಾನ್ ಮಾತ್ರ ಡಿಫರೆಂಟಾಗಿ ಬಂದಿರುವುದು ಸದ್ಯಕ್ಕೆ ಎಲ್ಲೆಡೆ ಚರ್ಚಿತವಾಗುತ್ತಿದೆ. ಅಂದಹಾಗೆ ಉತ್ತರ ಪ್ರದೇಶದ ಹಾಪುರ್, ಈ ವಿಭಿನ್ನ ಮದುವೆ ಸಮಾರಂಭಕ್ಕೆ ಸಾಕ್ಷಿಯಾಯಿತು.
ತನ್ನ ಮದುವೆ ಎಲ್ಲರಿಗಿಂತ ಭಿನ್ನವಾಗಿರಬೇಕು ಹಾಗೂ ಸದಾ ನೆನಪಿನಲ್ಲಿ ಉಳಿಯುವಂತೆ ನಡೆಯಬೇಕು ಎನ್ನುವುದು ಶಾರುಖ್ ಕನಸಾಗಿತ್ತಂತೆ. ಇದರೊಂದಿಗೆ ತಮ್ಮ ಪತ್ನಿ ತಾಂಜಿಮ್ ಬಯಕೆಯನ್ನೂ ಈಡೇರಿಸಿದ್ದಾರೆ ಶಾರುಖ್. ಇದೇ ಸಂದರ್ಭದಲ್ಲಿ ಮಾತನಾಡಿದ ವಧು ತಾಂಜಿಮ್, ‘ಪ್ರತಿಯೊಬ್ಬ ಹೆಣ್ಣು ತನ್ನನ್ನು ಮದುವೆಯಾಗುವ ರಾಜಕುಮಾರನ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾಳೆ. ರಾಜಕುಮಾರನ ಜತೆ ಆಗಸದಲ್ಲಿ ಹಾರಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ನನ್ನ ಕನಸು ಇದೀಗ ಈಡೇರಿದೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ವಧುವನ್ನು ವರ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯುತ್ತಿರುವುದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಮದುವೆ ಸಮಾರಂಭ ಸುವ್ಯವಸ್ಥಿತವಾಗಿ ಜರುಗಲು ಉತ್ತರ ಪ್ರದೇಶದ ಆಡಳಿತ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿತ್ತು. ಅಷ್ಟೇ ಅಲ್ಲದೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
Comments are closed.